"ಜೈಲಿನಲ್ಲಿ ನನಗೆ ಕುರ್ ಆನ್ ಕೊಡುತ್ತಿಲ್ಲ": ಅಲೆಕ್ಸಿ ನವಾಲ್ನಿ ಆರೋಪ
ಜೈಲಿನ ವಿರುದ್ಧವೇ ಕಾನೂನು ಹೋರಾಟಕ್ಕೆ ಸಿದ್ಧರಾದ ರಷ್ಯಾ ವಿಪಕ್ಷ ನಾಯಕ
ರಷ್ಯಾದ ವಿಪಕ್ಷ ನಾಯಕ ಅಲೆಕ್ಸಿ ನವಾಲ್ನಿ ಸದ್ಯ ಜೈಲಿನಲ್ಲಿ ಉಪವಾಸ ಸತ್ಯಾಗ್ರಹದಲ್ಲಿ ನಿರತರಾಗಿದ್ದು, ಈ ನಡುವೆ ಜೈಲಿನ ವಿರುದ್ಧವೇ ಕಾನೂನು ಹೋರಾಟ ನಡೆಸುವುದಾಗಿ ತಮ್ಮ ಸಾಮಾಜಿಕ ತಾಣದ ಖಾತೆಯಲ್ಲಿ ತಿಳಿಸಿದ್ದಾರೆ. ಶಿಕ್ಷೆಯ ಸಂದರ್ಭದಲ್ಲಿ ಅವರು ಮುಸ್ಲಿಮರ ಪವಿತ್ರ ಗ್ರಂಥ ಕುರ್ ಆನ್ ಅನ್ನು ಅಭ್ಯಸಿಸಲು ಮುಂದಾಗಿದ್ದು, ಆದರೆ ಜೈಲಿನ ಅಧಿಕಾರಿಗಳು ಕುರ್ ಆನ್ ನೀಡದೇ ತಡೆಹಿಡಿದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ಅವರು ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ...
ಕುರ್ ಆನ್ ಕಾರಣದಿಂದ ನಾನು ಮೊದಲ ಬಾರಿಗೆ ನನ್ನದೇ ವಸಾಹತಿನ ಮೇಲೆ ಮೊಕದ್ದಮೆ ಹೂಡುತ್ತೇನೆಂದು ಯಾರು ಭಾವಿಸಿದ್ದರು? ಹೌದು. ಜೈಲಿಗೆ ವೈದ್ಯರನ್ನು ಪ್ರವೇಶಿಸದಂತೆ ಮಾಡಿದ್ದಕ್ಕಲ್ಲ. ಬಂಧನದ ಪರಿಸ್ಥಿತಿಯ ಕಾರಣದಿಂದಲ್ಲ. ಆದರೆ ಮುಸ್ಲಿಮರ ಪವಿತ್ರ ಗ್ರಂಥಕ್ಕಾಗಿ.
"ವಿಷಯವೇನೆಂದರೆ, ಅವರು ನನಗೆ ನನ್ನ ಕುರ್ ಆನ್ ಅನ್ನು ನೀಡುವುದಿಲ್ಲ. ಅದು ನನಗೆ ನೋವುಂಟು ಮಾಡುತ್ತದೆ. ನಾನು ಜೈಲಿನಲ್ಲಿರುವ ವೇಳೆ ನನ್ನನ್ನು ಸುಧಾರಣೆ ಮಾಡುವ ಸಲುವಾಗಿ ಕೆಲವು ಕೆಲಸಗಳ ಪಟ್ಟಿ ಮಾಡಿದ್ದೇನೆ. ಅದರಲ್ಲಿ ಕುರ್ ಆನ್ ಅಧ್ಯಯನ ಹಾಗೂ ಪ್ರವಾದಿಯವರ ಸುನ್ನತ್ ಅನ್ನು ಆಳವಾಗಿ ಅಧ್ಯಯನ ಮಾಡಿ ಅರ್ಥೈಸಿಕೊಳ್ಳುವುದೂ ಒಂದು.
ಸುತ್ತಮುತ್ತಲಿನ ಪ್ರತಿಯೊಬ್ಬರೂ ಇಸ್ಲಾಂ ಮತ್ತು ಮುಸ್ಲಿಮರ ಕುರಿತು ಚರ್ಚಿಸುತ್ತಲೇ ಇದ್ದಾರೆ ಹಾಗೂ ಈ ಚರ್ಚಿಸುವ ೯೯% ಮಂದಿ ಈ ಕುರಿತು ಏನೂ ಅರ್ಥ ಮಾಡಿಕೊಂಡಿರುವುದಿಲ್ಲ. ನಾನು ರಷ್ಯಾದ ಮುಸ್ಲಿಮೇತರ ರಾಜಕಾರಣಿಗಳ ನಡುವೆ ಕುರ್ ಆನ್ ಚಾಂಪಿಯನ್ ಆಗಬೇಕೆಂದು ನಿರ್ಧರಿಸಿದೆ. ನಾನು ಈ ಮೊದಲು ಓದಿದ್ದೇನೆ.ಆದರೆ ಎಲ್ಲರಂತೇ ಸುಮ್ಮನೆ ಟಿಕ್ ಮಾಡಲು ಓದಿದ್ದೇನೆ, ಏನೂ ಅರ್ಥವಾಗಿರಲಿಲ್ಲ. ಇದು ನನಗೆ ಸಾಕಾಗುವುದೂ ಇಲ್ಲ.
ಒಬ್ಬ ಕ್ರೈಸ್ತನಾಗಿ ಕುರ್ ಆನ್ ಅನ್ನು ಅಧ್ಯಯನ ಮಾಡುವುದು ನನ್ನ ಅಗತ್ಯವೆಂದು ನಾನು ಅರಿತುಕೊಂಡೆ. ನಾನು ಅದನ್ನು ಹೃದಯದಿಂದ ಕಲಿಯುತ್ತೇನೆಂದು ನಾನು ನಿರ್ಧರಿಸಿದೆ. ಕುರ್ ಆನ್ ಅನ್ನು ತುಂಬಾ ಗಂಭೀರವಾಗಿ ಅಧ್ಯಯನ ಮಾಡಬೇಕಾದರೆ ಅರೆಬಿಕ್ ಭಾಷೆಯಲ್ಲೇ ಕಲಿಯಬೇಕು. ನಾನು ಹೇಗೆ ಕಲಿಯಲಿ? ಹೀಗಿರುವಾಗ ನನಗಿದ್ದ ಆಯ್ಕೆಯೆಂದರೆ ಕುರ್ ಆನ್ ನ 2,3 ಸಂಪುಟಗಳನ್ನು ಖರೀದಿಸುವುದು ಮತ್ತು ಉತ್ತಮ ಚಿಂತನಾಶೀಲನಾಗಿ ಓದುವುದು ಅಷ್ಟೇ.
ಆದರೆ ಈಗ ನಾನಿರುವ ʼಕಾನ್ಸಂಟ್ರೇಶನ್ ಕ್ಯಾಂಪ್ʼ ನಲ್ಲಿ ಅವರು ಪುಸ್ತಕವನ್ನು ದ್ವೇಷಿಸುತ್ತಾರೆ. ನಾನು ಒಂದು ತಿಂಗಳ ಹಿಂದೆ ಇಲ್ಲಿಗೆ ಬಂದೆ. ಒಂದು ರಾಶಿ ಪುಸ್ತಕವನ್ನು ಆರ್ಡರ್ ಮಾಡಿದೆ. ಆದರೆ ಇದುವರೆಗೆ ಒಂದೇ ಒಂದು ಪುಸ್ತಕ ನೀಡಿಲ್ಲ. ಅದರಲ್ಲಿ ಉಗ್ರವಾದವಿದೆಯೇ? ಎಂದು ಪರೀಕ್ಷಿಸಬೇಕು ಎನ್ನುತ್ತಾರೆ.
ನೀವು ಕುರ್ ಆನ್ ಮತ್ತು ಉಗ್ರವಾದವನ್ನು ಪರಿಶೀಲಿಸುತ್ತೀರಾ? ಇದು ಮೂರ್ಖತನ ಮತ್ತು ಕಾನೂನು ಬಾಹಿರ. ನಾನು ಒಂದು ತಿಂಗಳಿನಿಂದ ಈ ಸಂವಾದವನ್ನು ನಿರಂತರವಾಗಿ ನಡೆಸುತ್ತಾ ಬಂದಿದ್ದೇನೆ. ಹಾಗಾಗಿ ಮುಖ್ಯಸ್ಥರಿಗೆ ಮತ್ತೊಂದು ಹೇಳಿಕೆಯನ್ನು ಬರೆದು ಮೊಕದ್ದಮೆ ಹೂಡಿದೆ. ಸರಿ, ನೀವು ಎಷ್ಟು ದಿನ ಸಹಿಸಿಕೊಳ್ಳಬಹುದು? ಈಗೇನು, ನಿಮ್ಮ ಸ್ವಂತ ಕುರ್ ಆನ್ ಅನ್ನು ನಿಮಗೆ ಓದಲಾಗುವುದಿಲ್ಲವೇ? ಈಗ ನಾನು ಉಪವಾಸ ಸತ್ಯಾಗ್ರಹದ 13ನೇ ದಿನದಲ್ಲಿದ್ದೇನೆ ಮತ್ತು ತುಂಬಾ ತಾತ್ವಿಕ ಮನಸ್ಥಿತಿಯಲ್ಲಿದ್ದೇನೆ.
ಇಲ್ಲಿ ಪುಸ್ತಕಗಳು ನಮ್ಮ ಎಲ್ಲವೂ ಆಗಿದೆ. ಓದುವ ಹಕ್ಕಿಗಾಗಿ ಮೊಕದ್ದಮೆ ಹೂಡಬೇಕಾದರೆ ನಾನು ಮೊಕದ್ದಮೆ ಹೂಡುತ್ತೇನೆ."