ಸಾರಿಗೆ ನೌಕರರಿಗೆ 6ನೇ ವೇತನ ಆಯೋಗ ಜಾರಿಯಾಗಲಿ: ಬಿ.ಟಿ. ಲಲಿತಾ ನಾಯಕ್

ಬೆಂಗಳೂರು, ಎ.14: ರಾಜ್ಯದಲ್ಲಿ ಅತ್ಯುನ್ನತ ಸೇವೆಯಲ್ಲಿ ತೊಡಗಿರುವ ಸಾರಿಗೆ ನೌಕರರಿಗೆ 6ನೇ ವೇತನ ಆಯೋಗದ ಪ್ರಕಾರ ವೇತನವನ್ನು ಕೂಡಲೇ ಹೆಚ್ಚಳ ಮಾಡಬೇಕೆಂದು ಮಾಜಿ ಸಚಿವ ಲಲಿತಾ ನಾಯಕ್ ಒತ್ತಾಯಿಸಿದ್ದಾರೆ.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾರಿಗೆ ನೌಕರರ ವೇತನ ಹೆಚ್ಚಳ ಬೇಡಿಕೆಯು ನ್ಯಾಯಯುತವಾಗಿದೆ. ಅದನ್ನು ಈಡೇರಿಸುವುದು ಸರಕಾರದ ಕರ್ತವ್ಯವಾಗಬೇಕೆ ವಿನಃ ಹಠಮಾರಿ ಧೋರಣೆ ಮಾಡಬಾರದೆಂದು ಸರಕಾರಕ್ಕೆ ಒತ್ತಾಯಿಸಿದ್ದಾರೆ.
'ಸಾರಿಗೆ ನೌಕರರೊಂದಿಗೆ ನಾವೆಲ್ಲಾ ಇದ್ದೇವೆ': ರಾಜ್ಯ ಸರಕಾರದ ನಿರ್ಲಕ್ಷ್ಯ, ಸರ್ವಾಧಿಕಾರಿ ಧೋರಣೆಯಿಂದಾಗಿ ಮುಷ್ಕರ ನಿರತ ಸಾರಿಗೆ ನೌಕರರು ಭಿಕ್ಷೆ ಬೇಡುವ ಮಟ್ಟಕ್ಕೆ ಬಂದಿದ್ದಾರೆ. ಸಾರಿಗೆ ನೌಕರರು ರಾಜ್ಯ ಸರಕಾರದ ವಿರುದ್ಧ ತಿರುಗಿ ಬೀಳುವ ಮುನ್ನ ಎಚ್ಚೆತ್ತುಕೊಳ್ಳಬೇಕು. ಸಾರಿಗೆ ನೌಕರರ ಜತೆಗೆ ಇಡೀ ರಾಜ್ಯದ ಜನತೆ ಇದ್ದಾರೆಂಬುದನ್ನು ಅರ್ಥಮಾಡಿಕೊಳ್ಳಲಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ನೌಕರರು ಮಾಡುವ ಕೆಲಸವನ್ನು ಸಚಿವರು, ಶಾಸಕರು ಒಂದು ದಿನದ ಮಟ್ಟಿಗೆ ಮಾಡಲು ಸಾಧ್ಯವೇ. ಸಾರಿಗೆ ನೌಕರರು ಮಳೆ, ಬಿಸಿಲೆನ್ನದೆ ಹಗಲುರಾತ್ರಿ ದುಡಿಯುತ್ತಾರೆ. ಆದರೆ, ಅವರು ತಮ್ಮ ಜೀವನಕ್ಕೆ ಆಗುವಷ್ಟು ಹಣವನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈಗ ಸಾರಿಗೆ ನೌಕರರು ತಮ್ಮ ಹಕ್ಕುಗಳ ಈಡೇರಿಕೆಗಾಗಿ ರಾಜಿರಹಿತ ಮುಷ್ಕರ ಕೈಗೊಂಡಿದ್ದಾರೆ. ಅವರ ಬೇಡಿಕೆಗಳನ್ನು ಈಡೇರಿಸಬೇಕಾದದ್ದು ಸರಕಾರದ ಕರ್ತವ್ಯವೆಂದು ಅವರು ಒತ್ತಾಯಿಸಿದ್ದಾರೆ.





