ಅಂಬೇಡ್ಕರ್ ರನ್ನು ನೋಡುವ ದೃಷ್ಟಿ ಬದಲಾಗಬೇಕು: ದ.ಕ ಜಿಲ್ಲಾಧಿಕಾರಿ

ಮಂಗಳೂರು,ಎ.14:ಅಂಬೇಡ್ಕರ್ ಅವರು ಜೀವನದುದ್ದಕ್ಕೂ ಎದುರಿಸಿದ ಅಸ್ಪೃಶ್ಯತೆ, ಬಡತನ, ಸಂಕಷ್ಟಗಳ ಮಧ್ಯೆ ಕಲಿಯಬೇಕೆ ನ್ನುವ ಛಲ ಅವರನ್ನು ಹಲವು ಪದವಿಗಳನ್ನು ಪಡೆಯಲು ಪ್ರೇರೇಪಿಸಿತು ಹಾಗೂ ಮುಂದೊಂದು ದಿನ ಸಂವಿಧಾನ ಶಿಲ್ಪಿಯಾಗುವಂತೆ ಮಾಡಿತು, ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ರಾಜೇಂದ್ರ ಕೆ. ವಿ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಕದ್ರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಅಂಬೇಡ್ಕರರ 130ನೆ ಜಯಂತಿ ಪ್ರಯುಕ್ತ ಬುಧವಾರ ಹಮ್ಮಿಕೊಂಡಿದ್ದ ಗ್ರಂಥಾಲಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಅಂಬೇಡ್ಕರರನ್ನು ಒಂದು ಸಮುದಾಯಕ್ಕೆ ಮೀಸಲಿರಿಸುವ ಸರಿಯಾದುದಲ್ಲ. ಅವರು ವಿಶ್ವಜ್ಞಾನಿಯಾಗಿದ್ದಾರೆ ಎಂದರು.
ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಡಾ.ಯೋಗೇಶ್ ಎಸ್. ಬಿ, ಅಂಬೇಡ್ಕರರು ವಿಶ್ವದ ಬೃಹತ್ ಲಿಖಿತ ಸಂವಿಧಾನ ರಚಿಸಬೇಕಾದರೆ ಅದರ ಹಿಂದಿನ ಪರಿಶ್ರಮ ಸಾಮಾನ್ಯವಾದುದಲ್ಲ. ನಾವು ಅವರಂತೆ ಆಗದಿದ್ದರೂ ಅವರ ಮಾರ್ಗದರ್ಶನದಲ್ಲಿ ನಡೆಯುವ ಪ್ರಯತ್ನ ಮಾಡೋಣ, ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಜಂಟಿ ಆಯುಕ್ತ ಸಂತೋಷ್ ಕುಮಾರ್ ಕದ್ರಿ, ವಸತಿ ನಿಲಯದ ಮೇಲ್ವಿಚಾರಕ ಸಂತೋಷ್ ನಾಯಕ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.








