ಸ್ಕಾನಿಯಾ ಕಂಪೆನಿಯಿಂದ ಐಶಾರಾಮಿ ಬಸ್ ʼಉಡುಗೊರೆʼ ಪಡೆದಿದ್ದರೇ ನಿತಿನ್ ಗಡ್ಕರಿ?
ಸೋರಿಕೆಯಾಗಿರುವ ದಾಖಲೆಗಳಿಂದ ಹಲವು ಮಾಹಿತಿಗಳು ಬಹಿರಂಗ

photo: thewire.in
ಹೊಸದಿಲ್ಲಿ/ಬರ್ಲಿನ್/ಸ್ಟಾಕ್ಹೋಮ್,ಎ.14: ಸ್ವೀಡನ್ ನ ಬಸ್ ಮತ್ತು ಟ್ರಕ್ ತಯಾರಿಕೆ ಕಂಪನಿ ಸ್ಕಾನಿಯಾ 2015,ಮಾರ್ಚ್ ನಲ್ಲಿ ಕರ್ನಾಟಕದ ನರಸಾಪುರದಲ್ಲಿ ತನ್ನ ನಿರ್ಮಾಣ ಘಟಕವನ್ನು ಕಾರ್ಯಾರಂಭಗೊಳಿಸಿದ ಎರಡೇ ತಿಂಗಳಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಪುತ್ರರಾದ ನಿಖಿಲ್ ಗಡ್ಕರಿ ಮತ್ತು ಸಾರಂಗ್ ಗಡ್ಕರಿ ಅವರು ಕುಟುಂಬದ ಕಾರ್ಯಕ್ರಮಕ್ಕಾಗಿ ಸಕಾಲದಲ್ಲಿ ಐಷಾರಾಮಿ ಬಸ್ ಒಂದನ್ನು ಸಿದ್ಧಗೊಳಿಸಲು ಕಂಪನಿಯ ಅಧಿಕಾರಿಯೋರ್ವರ ಜೊತೆ ಮಾತುಕತೆಗಳನ್ನು ಆರಂಭಿಸಿದ್ದರು ಎನ್ನುವುದನ್ನು ಸೋರಿಕೆಯಾಗಿರುವ ದಾಖಲೆಗಳು ಬಹಿರಂಗಗೊಳಿಸಿವೆ.
ಸ್ಕಾನಿಯಾ ಸ್ವೀಡನ್ ನಲ್ಲಿ ನಡೆಸಿದ್ದ ಆಂತರಿಕ ತನಿಖೆಯು ಈ ಬಸ್ ವಹಿವಾಟು ಸಚಿವರಿಗೆ ಹಣಕಾಸು ಲಾಭದ ಕೊಡುಗೆಯಾಗಿದೆ ಎಂದು ಬೆಟ್ಟು ಮಾಡಿತ್ತು. ಈ ಹಣಕಾಸಿನ ಜಾಡು ಹಿಡಿದು ಹೋದಾಗ ಈ ವ್ಯವಹಾರದಲ್ಲಿ ಸಚಿವರ ಕುಟುಂಬದ ಪಾಲ್ಗೊಳ್ಳುವಿಕೆಯ ಬಗ್ಗೆ ಹಲವಾರು ಪ್ರಶ್ನೆಗಳೆದ್ದಿವೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿಯವರು ತನ್ನ ವೈಯಕ್ತಿಕ ಬಳಕೆಗಾಗಿ ಸ್ಕಾನಿಯಾದಿಂದ ಐಷಾರಾಮಿ ಬಸ್ ಅನ್ನು ಪಡೆದಿದ್ದಾರೆ ಎಂದು ಸ್ವೀಡನ್ನಿನ ರಾಷ್ಟ್ರೀಯ ಟೆಲಿವಿಷನ್ (ಎಸ್ವಿಟಿ), ಜರ್ಮನಿಯ ಸಾರ್ವಜನಿಕ ವಲಯದ ಟಿವಿ ಝಡಿಎಫ್ ಮತ್ತು ಭಾರತದ ಕಾನ್ಫ್ಲುಯೆನ್ಸ್ ಮೀಡಿಯಾ 2021,ಮಾ.9ರಂದು ತಮ್ಮ ಜಂಟಿ ತನಿಖಾ ವರದಿಯಲ್ಲಿ ಬಯಲುಗೊಳಿಸಿದಾಗ,ಈ ಆರೋಪವನ್ನು ತಕ್ಷಣವೇ ನಿರಾಕರಿಸಲಾಗಿತ್ತು.
ತನ್ನ ಮತ್ತು ತನ್ನ ಕುಟುಂಬದ ವಿರುದ್ಧದ ಆರೋಪಗಳು ದುರುದ್ದೇಶಪೂರಿತ, ಕಪೋಲಕಲ್ಪಿತ ಮತ್ತು ಆಧಾರರಹಿತವಾಗಿವೆ ಎಂದು ಗಡ್ಕರಿ ಬಣ್ಣಿಸಿದ್ದರು. ಕೆಲವು ದಿನಗಳ ಬಳಿಕ ಸುದ್ದಿ ಜಾಲತಾಣವೊಂದಕ್ಕೆ ನೀಡಿದ್ದ ಸಂದರ್ಶನದಲ್ಲಿ ವರದಿಗಾರರು ತಮ್ಮ ಕೆಲಸವನ್ನು ಶ್ರದ್ಧೆಯಿಂದ ಮಾಡುವುದಿಲ್ಲ ಎಂದು ಆರೋಪಿಸಿದ್ದ ಗಡ್ಕರಿ, ತನಗೆ ಯಾವುದೇ ಬಸ್ ಅನ್ನು ಉಡುಗೊರೆಯಾಗಿ ನೀಡಿರುವುದನ್ನು ಖದ್ದು ಸ್ಕಾನಿಯಾ ಕಂಪನಿಯೇ ನಿರಾಕರಿಸಿದೆ ಎಂದು ಬೆಟ್ಟು ಮಾಡಿದ್ದರು.
ಸಚಿವರ ಪ್ರತಿಪಾದನೆಗಳು ಸಂಪೂರ್ಣ ಸುಳ್ಳು ಅಲ್ಲವಾಗಿರದಿದ್ದರೆ ದಾರಿ ತಪ್ಪಿಸುವಂಥದ್ದಂತೂ ಆಗಿವೆ. ಈಗ ಇ-ಮೇಲ್ ಸಂಭಾಷಣೆಗಳು, ಮೊಬೈಲ್ ಚಾಟ್ ಗಳು,ಗುತ್ತಿಗೆಗಳು,ಹಣ ಸ್ವೀಕೃತಿಗಳು ಮತ್ತು ಯಾವುದೇ ಭದ್ರತೆಯಿಲ್ಲದ ಸಾಲ ವರ್ಗಾವಣೆಗಳ ರೂಪದಲ್ಲಿ ತಿರಸ್ಕರಿಸಲು ಸಾಧ್ಯವಿಲ್ಲದ ಸಾಕ್ಷಗಳು ಲಭ್ಯವಾಗಿವೆ ಮತ್ತು ಇವು ಸ್ಕಾನಿಯಾದಿಂದ ಐಷಾರಾಮಿ ಬಸ್ ಪಡೆದುಕೊಳ್ಳುವಲ್ಲಿ ಗಡ್ಕರಿಯವರ ಕುಟುಂಬದ ಸಕ್ರಿಯ ತೊಡಗುವಿಕೆಯನ್ನು ಸಾಬೀತುಗೊಳಿಸಿವೆ.
ಸ್ಕಾನಿಯಾದ ಆಂತರಿಕ ತನಿಖಾ ವರದಿ,ಗಡ್ಕರಿಯವರ ಪುತ್ರರು, ಅವರಿಗೆ ಸಂಬಂಧಿಸಿದ ಕಂಪನಿಗಳು ಮತ್ತು ಸ್ಕಾನಿಯಾ ಇಂಡಿಯಾದ ಅಧಿಕಾರಿಗಳ ನಡುವಿನ ಮೂರು ವರ್ಷಗಳ ಇ-ಮೇಲ್ ಮತ್ತು ವಾಟ್ಸಾಪ್ ಸಂವಹನಗಳು ಕಾನ್ಫ್ಲುಯೆನ್ಸ್ ಮೀಡಿಯಾ, ಝಡಿಎಫ್ ಮತ್ತು ಎಸ್ವಿಟಿ ಬಳಿಯಲ್ಲಿವೆ. ಈ ವರದಿಗೆ ಸಂಬಂಧಿಸಿದ ಎಲ್ಲ ಸಂವಹನಗಳನ್ನು ಭಾರತ ಮತ್ತು ಸ್ವೀಡನ್ನ ವಿಧಿವಿಜ್ಞಾನ ತಜ್ಞರು ದೃಢಪಡಿಸಿದ್ದಾರೆ.
ನಿತಿನ್,ಸಾರಂಗ್ ಮತ್ತು ನಿಖಿಲ್ ಗಡ್ಕರಿಯವರು ವಾಸ್ತವಾಗಿ ಬಸ್ ಅನ್ನು ಸ್ವಾಧೀನಕ್ಕೆ ಪಡೆದುಕೊಂಡಿದ್ದರು ಎನ್ನುವುದು ಕಂಡು ಬಂದಿದೆ ಎಂದು ಸ್ಕಾನಿಯಾದ ಆಂತರಿಕ ತನಿಖಾ ವರದಿಯು ಸ್ಪಷ್ಟವಾಗಿ ಹೇಳಿದೆ.
ಬಸ್ ವ್ಯವಹಾರದ ಪ್ರತಿಯೊಂದು ಹಂತದಲ್ಲಿಯೂ ಸಾರಂಗ್ ಮತ್ತು ನಿಖಿಲ್ ಗಡ್ಕರಿ ಅವರು ಸ್ಕಾನಿಯಾದ ಭಾರತೀಯ ಅಂಗಸಂಸ್ಥೆ ಸ್ಕಾನಿಯಾ ಕಮರ್ಷಿಯಲ್ ವೆಹಿಕಲ್ಸ್ ಪ್ರೈವೇಟ್ ಲಿ.(ಸ್ಕಾನಿಯಾ ಇಂಡಿಯಾ)ನ ಹಿರಿಯ ಅಧಿಕಾರಿಯೊಂದಿಗೆ ನೇರ ಮತ್ತು ನಿರಂತರ ಸಂಪರ್ಕದಲ್ಲಿದ್ದರು ಎನ್ನುವುದನ್ನು ಕಂಪನಿಯ ತನಿಖೆಯು ಸಾಬೀತುಗೊಳಿಸಿದೆ. ವಿವಾದದಲ್ಲಿರುವ ಬಸ್, ಉನ್ನತ ಶ್ರೇಣಿಯ ಸ್ಕಾನಿಯಾ ಮೆಟ್ರೋಲಿಂಕ್ 2016 , ಡಿಸೆಂಬರ್ನಲ್ಲಿ ನಾಗ್ಪುರದಲ್ಲಿ ಅದ್ದೂರಿಯಾಗಿ ನಡೆದಿದ್ದ ಗಡ್ಕರಿಯವರ ಪುತ್ರಿ ಕೇತಕಿ ಗಡ್ಕರಿ ಅವರ ವಿವಾಹ ಸಂದರ್ಭದಲ್ಲಿ ಬಳಕೆಯಾಗಿತ್ತೆನ್ನಲಾಗಿದೆ.
ಬಸ್ ಕೇತಕಿ ಗಡ್ಕರಿ ವಿವಾಹಕ್ಕೆಂದೇ ಸಿದ್ಧಗೊಂಡಿತ್ತು ಎನ್ನುವುದನ್ನು ಸಿಇಒ ಸೇರಿದಂತೆ ಸ್ವೀಡನ್ನಿನ ಸ್ಕಾನಿಯಾ ಎಬಿ ಕಚೇರಿಗಳಲ್ಲಿಯ ಹಲವಾರು ಮೂಲಗಳು ದೃಢಪಡಿಸಿವೆ ಮತ್ತು ಈ ವ್ಯವಹಾರದ ಹಿಂದಿನ ನಿಜವಾದ ಉದ್ದೇಶದ ಬಗ್ಗೆ ಸ್ಕಾನಿಯಾ ಇಂಡಿಯಾದ ಹಿರಿಯ ಅಧಿಕಾರಿಗಳಿಗೆ ಅರಿವಿತ್ತು.
ಸ್ಕಾನಿಯಾ ಮತ್ತು ಗಡ್ಕರಿ ಸಣ್ಣ, ಅಪರಿಚಿತ ಖಾಸಗಿ ಕಂಪೆನಿಗಳ ಮರೆಯಲ್ಲಿ ಈ ವ್ಯವಹಾರವನ್ನು ಅಂತಿಮಗೊಳಿಸಿದ್ದರೆ, ಬಸ್ ವಾಸ್ತವದಲ್ಲಿ ಸಚಿವರು ಮತ್ತು ಅವರ ಕುಟುಂಬಕ್ಕಾಗಿಯೇ ಆಗಿತ್ತು ಎನ್ನುವುದನ್ನು ಸೂಚಿಸುವ ಸಾಕಷ್ಟು ಸಾಕ್ಷಾಧಾರಗಳಿವೆ.
ವ್ಯವಹಾರದ ಕುರಿತು ಮಾತುಕತೆಗಳ ಆರಂಭ ಮತ್ತು ನಾಗ್ಪುರಕ್ಕೆ ಬಸ್ ಪೂರೈಕೆಯ ನಡುವಿನ 18 ತಿಂಗಳುಗಳ ಅವಧಿಯಲ್ಲಿ ಸಾರಂಗ್ ಗಡ್ಕರಿ ಬಸ್ ಅನ್ನು ಪರಿಶೀಲಿಸಲು ನರಸಾಪುರದಲ್ಲಿಯ ಸ್ಕಾನಿಯಾ ಫ್ಯಾಕ್ಟರಿಗೆ ಭೇಟಿ ನೀಡಿದ್ದರು. ಅವರು ಪುಣೆಯಲ್ಲಿನ ಖಾಸಗಿ ವಾಹನ ವಿನ್ಯಾಸ ಸಂಸ್ಥೆ ದಿಲೀಪ್ ಛಾಬ್ರಿಯಾ ಡಿಸೈನ್ ಪ್ರೈ.ಲಿ.ಗೂ ಭೇಟಿ ನೀಡಿದ್ದರು ಮತ್ತು ಅದು ಸಹೋದರರ ಇಚ್ಛೆಗಳಿಗೆ ಅನುಗುಣವಾಗಿ ಬಸ್ ನ ಒಳಭಾಗದ ವಿನ್ಯಾಸಗಳನ್ನು ಬದಲಿಸಿತ್ತು. ಸಾರಂಗ್ ಗಡ್ಕರಿಯವರ ಎಲ್ಲ ಭೇಟಿಗಳ ಸಂದರ್ಭಗಳಲ್ಲಿ ಸ್ಕಾನಿಯಾದ ಅಧಿಕಾರಿಯೋರ್ವರು ಅವರ ಜೊತೆಯಲ್ಲಿದ್ದರು.
ಬಸ್ ನಿರ್ಮಾಣದಲ್ಲಿನ ಪ್ರಗತಿಯ ಬಗ್ಗೆ ಸಾರಂಗ್ ಗಡ್ಕರಿಗೆ ನಿಯಮಿತವಾಗಿ ಮಾಹಿತಿಗಳನ್ನು ಒದಗಿಸಲಾಗುತ್ತಿದ್ದರೆ,ವ್ಯವಹಾರದ ಆರಂಭದಲ್ಲಿ ಮತ್ತು ಅಂತ್ಯದಲ್ಲಿ ನಿಖಿಲ್ ಗಡ್ಕರಿಯವರು ಸ್ಕಾನಿಯಾ ಅಧಿಕಾರಿಗಳೊಂದಿಗೆ ನೇರ ಸಂಪರ್ಕದಲ್ಲಿದ್ದರು. ವಾಸ್ತವದಲ್ಲಿ ಹಣ ಪಾವತಿಗಾಗಿ ಮನವಿಗಳನ್ನು ಬಸ್ ಅನ್ನು ಪಡೆದುಕೊಂಡಿದ್ದ ಕಂಪನಿಯ ಬದಲು ಗಡ್ಕರಿ ಸೋದರರಿಗೇ ಮಾಡಲಾಗಿತ್ತು. ಅಂತ್ಯದಲ್ಲಿ ಸ್ಕಾನಿಯಾ ಬಸ್ ನ ವೆಚ್ಚಗಳನ್ನು ಭರ್ತಿ ಮಾಡಿಕೊಳ್ಳಲು ಪರದಾಡುವಂತಾಗಿತ್ತು.
ಗಡ್ಕರಿಯವರ ಕುಟುಂಬಕ್ಕೆ ಐಷಾರಾಮಿ ಬಸ್ ಅನ್ನು ಹಸ್ತಾಂತರಿಸಲಾಗಿತ್ತು ಮತ್ತು ಇಂದಿಗೂ ಬಸ್ ನ ಪೂರ್ಣ ಮೌಲ್ಯ ಪಾವತಿಯಾಗಿಲ್ಲ ಎಂದು ಸ್ಕಾನಿಯಾ ಆಂತರಿಕ ತನಿಖಾ ವರದಿ ಬೆಟ್ಟು ಮಾಡಿದೆ. ಈ ಬಸ್ ವ್ಯವಹಾರದ ವರದಿಯು ಮೊದಲ ಬಾರಿಗೆ ಝಡಿಎಫ್ ಮತ್ತು ಸ್ವೀಡನ್ನನ ರಾಷ್ಟ್ರೀಯ ಟಿವಿಯಲ್ಲಿ ಸ್ಫೋಟಿಸಿದಾಗ ಡ್ಯಾಮೇಜ್ ಕಂಟ್ರೋಲ್ ಪ್ರಯತ್ನವಾಗಿ ಸ್ಕಾನಿಯಾದ ವಕ್ತಾರರು ಭಾರತೀಯ ಮಾಧ್ಯಮಗಳು ಎತ್ತಿದ್ದ ಪ್ರಶ್ನೆಗಳಿಗೆ ಸಮಜಾಯಿಷಿ ನೀಡಿ,ಸ್ಕಾನಿಯಾ ಇಂಡಿಯಾ ಗಡ್ಕರಿಯವರಿಗೆ ಬಸ್ ಉಡುಗೊರೆಯನ್ನು ನೀಡಿಲ್ಲ. ಸ್ಕಾನಿಯಾ ತನ್ನ ಡೀಲರ್ಗೆ ಬಸ್ ಮಾರಾಟ ಮಾಡಿತ್ತು ಮತ್ತು ಅದು ಬಸ್ ಸಾರಿಗೆ ಕಂಪನಿಯೊಂದಕ್ಕೆ ಬಸ್ನ್ನು ಬಾಡಿಗೆಗೆ ನೀಡಿತ್ತು ಅಥವಾ ಮಾರಾಟ ಮಾಡಿತ್ತು ಎಂದು ಹೇಳಿದ್ದರು.
ಸ್ಕಾನಿಯಾ ವಕ್ತಾರರ ಈ ಹೇಳಿಕೆಗಳನ್ನು ನಿತಿನ್ ಗಡ್ಕರಿ ಉಲ್ಲೇಖಿಸಿದ್ದರು ಮತ್ತು ಅವರ ಕಚೇರಿಯು ಇನ್ನೂ ಒಂದು ಹೆಜ್ಜೆ ಮುಂದೆ ಸಾಗಿ, ಗಡ್ಕರಿ ಕುಟುಂಬಕ್ಕೂ ಬಸ್ ಹೊಂದಿರುವ ಸಂಸ್ಥೆಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದೆ.
ಆದರೆ ಈ ಹೇಳಿಕೆಗಳು ಸಂಪೂರ್ಣ ಸುಳ್ಳು ಎನ್ನುವುದನ್ನು ಗಡ್ಕರಿ ಪುತ್ರರು ಮತ್ತು ಸ್ಕಾನಿಯಾ ಅಧಿಕಾರಿಗಳ ನಡುವಿನ ಇ-ಮೇಲ್ಗಳು ಸಾಬೀತುಗೊಳಿಸಿವೆ. ಸಾರಂಗ್ ಗಡ್ಕರಿಯವರ ಮಾನಸ ಅಗ್ರೋ ಕಂಪನಿಯು ಬಸ್ ಅನ್ನು ಲೀಸ್ ಗೆ ಪಡೆದಿದ್ದ ಸುದರ್ಶನ ಹಾಸ್ಪಿಟಾಲಿಟಿಗೆ ಭದ್ರತೆಯಿಲ್ಲದ ಸಾಲವನ್ನು ನೀಡಿತ್ತು ಎನ್ನುವುದನ್ನು ದಾಖಲೆಗಳು ತೋರಿಸಿವೆ. ಬಸ್ ನ ಭದ್ರತಾ ಠೇವಣಿ ಬಾಕಿಯಾಗಿದ್ದು, ಈ ಬಗ್ಗೆ ಸ್ಕಾನಿಯಾ ಗಡ್ಕರಿ ಸೋದರರಿಗೆ ಮನವಿ ಮಾಡಿಕೊಂಡಿತ್ತು. ಈ ಸಾಲವು ಭಾಗಶಃ ಭದ್ರತಾ ಠೇವಣಿಯ ಪಾವತಿಗಾಗಿ ನೀಡಲಾಗಿತ್ತು ಎನ್ನುವುದನ್ನು ಈ ಸಾಲ ನೀಡಿಕೆಯ ಸಮಯವು ಸೂಚಿಸುತ್ತಿದೆ.
ಬಸ್ ಗೆ ಆರ್ಥಿಕ ನೆರವು ಒದಗಿಸಿದ್ದ ಫೋಕ್ಸ್ವ್ಯಾಗನ್ ಫೈನಾನ್ಸ್ ಪ್ರೈ.ಲಿ.ಕೂಡ ಇದರಲ್ಲಿ ಭಾಗಿಯಾಗಿದೆ ಎಂದು ಸ್ಕಾನಿಯಾದ ಆಂತರಿಕ ವರದಿಯು ಹೇಳಿದೆ. ಬಸ್ ಸಚಿವ ಗಡ್ಕರಿ ಅವರಿಗಾಗಿ ಸಿದ್ಧಗೊಂಡಿತ್ತು ಎನ್ನುವುದು ಗೊತ್ತಿದ್ದ ಅದು ಬಸ್ ಗೆ ಸಾಲವನ್ನು ಮಂಜೂರು ಮಾಡುವ ಮುನ್ನ ವಹಿವಾಟಿನಲ್ಲಿ ಭಾಗಿಯಾಗಿದ್ದ ಕಂಪನಿಗಳ ಹಿನ್ನೆಲೆ ಮತ್ತ್ತು ಆರ್ಥಿಕ ದೃಢತೆಯನ್ನು ಪರಿಶೀಲಿಸುವ ಗೋಜಿಗೆ ಹೋಗಿರಲಿಲ್ಲ. ಅಂದ ಹಾಗೆ ಫೋಕ್ಸ್ವ್ಯಾಗನ್ ಫೈನಾನ್ಸ್ ಜರ್ಮನಿಯ ಫೋಕ್ಸ್ವ್ಯಾಗನ್ ಎಜಿಯ ಅಂಗವಾಗಿದೆ ಮತ್ತು ಫೋಕ್ಸ್ವಾಗನ್ ಎಜಿ ಸ್ಕಾನಿಯಾ ಎಬಿಯ ಒಡೆತನವನ್ನು ಹೊಂದಿದೆ.
ಬಸ್ ನಾಗ್ಪುರವನ್ನು ತಲುಪಿದ ಬಳಿಕ ಮುಖವಾಡ ಕಂಪನಿಯಾಗಲೀ ಗಡ್ಕರಿ ಕುಟುಂಬವಾಗಲಿ ಒಂದೇ ಒಂದು ಪೈಸೆಯನ್ನು ಪಾವತಿಸಲಿಲ್ಲ. ಅಂತಿಮವಾಗಿ ಬಸ್ ನ ಮೌಲ್ಯ,ಅದರ ದುಬಾರಿ ವಿನ್ಯಾಸದ ವೆಚ್ಚ ಮತ್ತು ಸಾಲದ ಮೇಲಿನ ಬಡ್ಡಿ ಇವೆಲ್ಲ ಸೇರಿದಂತೆ 2.2 ಕೋ.ರೂ.ಗಳ ಹೊರೆ ಸಾಲಕ್ಕೆ ಶೇ.100ರಷ್ಟು ಖಾತರಿ ನೀಡಿದ್ದ ಸ್ಕಾನಿಯಾದ ತಲೆಯ ಮೇಲೆ ಬಿದ್ದಿತ್ತು. ತನ್ನ ಸ್ವಂತ ಬೊಕ್ಕಸದಿಂದ ಈ ಹೊರೆಯನ್ನು ಭರ್ತಿ ಮಾಡಿಕೊಂಡ ಸ್ಕಾನಿಯಾ ಬಲವಾದ ಸಾಕ್ಷಾಧಾರಗಳಿದ್ದರೂ ಈ ವಿಷಯವನ್ನು ಸ್ವೀಡನ್ ಅಥವಾ ಭಾರತದಲ್ಲಿಯ ಅಧಿಕಾರಿಗಳಿಗೆ ಎಂದೂ ವರದಿ ಮಾಡಿರಲಿಲ್ಲ.
ಸ್ಕಾನಿಯಾ ಬಸ್ ಕುರಿತು ವರದಿಯು ಪ್ರಕಟಗೊಂಡ ಎರಡು ದಿನಗಳ ಬಳಿಕ ಗಡ್ಕರಿ ಪರ ವಕೀಲರು ಅದನ್ನು ಹಿಂದೆಗೆದುಕೊಳ್ಳುವಂತೆ ಎಸ್ವಿಟಿಗೆ ಪತ್ರ ಬರೆದಿದ್ದರು. ಆದರೆ ಎಸ್ವಿಟಿ ಅವರ ಕೋರಿಕೆಯನ್ನು ನಿರಾಕರಿಸಿದೆ.
ಈಗಲೂ ಸ್ಕಾನಿಯಾ ಎಬಿ ಮತ್ತು ಫೋಕ್ಸ್ವ್ಯಾಗನ್ ಎಜಿ ಈ ಐಷಾರಾಮಿ ಬಸ್ ಈಗ ಎಲ್ಲಿದೆ ಮತ್ತು ಅದರ ಮಾಲಕರು ಯಾರು ಎಂಬ ಬಗ್ಗೆ ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿವೆ.
ಕೃಪೆ: thewire.in