ಉಡುಪಿ: ವಿಶ್ವ ಕಲಾ ದಿನಾಚರಣೆ ಪ್ರಯುಕ್ತ ಮರಳು ಶಿಲ್ಪ ರಚನೆ

ಉಡುಪಿ, ಎ.14: ಕುಂದಾಪುರದ ತ್ರಿವರ್ಣ ಕಲಾ ಕೇಂದ್ರ, ರೋಟರಿ ಕ್ಲಬ್ ಸಹಯೋಗದಲ್ಲಿ ವಿಶ್ವ ಕಲಾ ದಿನಾಚರಣೆಯ ಪ್ರಯುಕ್ತ ಕಲಾ ಕೇಂದ್ರದ ಚಿತ್ರಕಲಾ ವಿದ್ಯಾರ್ಥಿಗಳು ಕೋಟೇಶ್ವರದ ಕೋಡಿ ಕಡಲ ಕಿನಾರೆಯಲ್ಲಿ ಮರಳು ಶಿಲ್ಪ ಮೂಲಕ ಕಲಾತ್ಮಕತೆಯನ್ನು ಬಿಂಬಿಸಿದರು.
ಕಲೆಯ ಪ್ರಾಮುಖ್ಯತೆ ಮತ್ತು ಕಲಾ ಅಸ್ತಿತ್ವದ ಕುರಿತು ಆರ್ಟ್ ಫಾರ್ ಆಲ್ ಎಂಬ ಧ್ಯೇಯದಡಿಯಲ್ಲಿ ಬಣ್ಣದ ತಟ್ಟೆಯಲ್ಲಿ ಸೀ-ಆರ್ಟ್, ಡು- ಆರ್ಟ್, ಬೀ-ಆರ್ಟ್ ಎಂಬ ಸಂದೇಶವನ್ನು ಕುಂಚದೊಂದಿಗೆ ವಿಶ್ವದ ದೃಷ್ಟಿಯಲ್ಲಿನ ಕಣ್ಣಿನ ಬಿಂಬದ ರಚನೆ ಹಾಗೂ ವಿಶ್ವ ವಿಖ್ಯಾತ ಕಲಾವಿದ, ಶಿಲ್ಪಿ, ವಾಸ್ತುಶಿಲ್ಪಿ, ವಿಜ್ಞಾನಿ, ನಕ್ಷೆಗಾರ, ಸಿದ್ದಾಂತಿ, ಲಿಯಾನಾರ್ಡೋ ಡಾ.ವಿನ್ಸಿಯ ವ್ಯಕ್ತಿತ್ವ ಪರಿಚಯವನ್ನು ಈ ಸಂದರ್ಭ ತಿಳಿಯಪಡಿಸಲಾಯಿತು.
ವಿದ್ಯಾರ್ಥಿಗಳಾದ ಅಶ್ವಿನ್ ಜಿ.ರಾವ್, ಅವನಿ ಆರ್.ಶೆಟ್ಟಿ, ಅದಿಥಿ ಎ. ಯು., ಹರಿದಾಸ್ ಮಲ್ಯ, ಶ್ರೀಜಿತ್, ಹರ್ಷ ಕೊತ್ವಾಲ್, ಅದ್ವಿತ್, ಮೀತ್, ದೇವಿಕಾ ಉಡುಪ, ಕಲಾವಿದ ಹರೀಶ್ ಸಾಗಾ ಮಾರ್ಗದರ್ಶನದಲ್ಲಿ 12 ಅಡಿ ಅಗಲ 4 ಅಡಿ ಎತ್ತರದ ಶಿಲ್ಪಾಕೃತಿಯನ್ನು ರಚಿಸಿದರು.
ರೋಟರಿ ಅಧ್ಯಕ್ಷ ಮುಹಮ್ಮದ್ ಅಷ್ಪಾಕ್, ಕಾರ್ಯದರ್ಶಿ ಸತೀಶ್ ಕೊತ್ವಾಲ್, ಮಾಜಿ ರೋಟರಿ ಅಧ್ಯಕ್ಷ ಕೆ.ಆರ್.ನಾಯ್ಕಾ, ಗಣೇಶ್ ಐತಾಳ್, ಗೀತಾಂಜಲಿ ಆರ್.ನಾಯ್ಕಾ ರಾಘವೇಂದ್ರ, ಸಂತೋಷ್ ಭಟ್ ಉಪಸ್ಥಿತಿ ಯಲ್ಲಿ ವಿದ್ಯಾರ್ಥಿಯರಿಗೆ ಅಭಿನಂದನಾ ಪತ್ರ ವಿತರಿಸಲಾಯಿತು.







