ಉಡುಪಿ: 110 ಮಂದಿಗೆ ಕೊರೋನ ಪಾಸಿಟಿವ್

ಉಡುಪಿ, ಎ.14: ಕೊರೋನ ಎರಡನೇ ಅಲೆ ಜಿಲ್ಲೆಯಲ್ಲಿ ಏರಿಕೆಯ ಸೂಚನೆಗಳನ್ನು ನೀಡುತಿದ್ದು, ಬುಧವಾರ 110 ಮಂದಿಗೆ ಕೋವಿಡ್ ಪಾಸಿಟಿವ್ ಬಂದಿದ್ದು, ದಿನದಲ್ಲಿ 62 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಸದ್ಯ ಕೋವಿಡ್‌ಗೆ ಸಕ್ರಿಯರಾಗಿರುವವರ ಸಂಖ್ಯೆ ಈಗ 474ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಇಂದು ಪಾಸಿಟಿವ್ ಬಂದ 110 ಮಂದಿಯಲ್ಲಿ 62 ಮಂದಿ ಪುರುಷರು ಹಾಗೂ 48 ಮಂದಿ ಮಹಿಳೆಯರು. ಇವರಲ್ಲಿ 71 ಮಂದಿ ಉಡುಪಿ ತಾಲೂಕಿನವರಾದರೆ 26 ಮಂದಿ ಕುಂದಾಪುರ ತಾಲೂಕಿನವರು. ಉಳಿದವರಲ್ಲಿ ಎಂಟು ಮಂದಿ ಕಾರ್ಕಳ ತಾಲೂಕಿನವ ರಾದರೆ ಹೊರಜಿಲ್ಲೆಯಿಂದ ಬಂದ ಐವರು ಸಹ ಇಂದು ಪಾಸಿಟಿವ್ ಬಂದಿದ್ದಾರೆ. 110ರಲ್ಲಿ 90 ಮಂದಿ ಹೋಮ್ ಐಸೋಲೇಷನ್ ನಲ್ಲಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಮಂಗಳವಾರ 62 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 25,592ಕ್ಕೇರಿದೆ. ನಿನ್ನೆ ಜಿಲ್ಲೆಯ 4601 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 110 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ ಈಗ 26,258 ಎಂದು ಡಾ.ಸೂಡ ತಿಳಿಸಿದರು.
ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯಲ್ಲಿರುವ 60ಕ್ಕೂ ಅಧಿಕ ಸೋಂಕಿತರಲ್ಲಿ ಅರ್ಧದಷ್ಟು ಮಂದಿ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,54,567 ಮಂದಿ ಕೋವಿಡ್ ಪರೀಕ್ಷೆಗೊಳಗಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ನಿಂದ ಸತ್ತವರ ಸಂಖ್ಯೆ 192 ಆಗಿದೆ.







