ವೈದಿಕ ಧರ್ಮದ ಭಯದಿಂದ ಹೊರಬರುವವರೆಗೆ ಮುಕ್ತಿ ಇಲ್ಲ: ಎನ್.ಮಣೂರು
ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಬಿ.ಆರ್.ಅಂಬೇಡ್ಕರ್‌ರ 130ನೇ ಜನ್ಮದಿನಾಚರಣೆ

ಉಡುಪಿ, ಎ.14: ವೈದಿಕ ಧರ್ಮದ ಭಯದಿಂದ ಹೊರಬರುವವರೆಗೆ ಖಂಡಿತ ನಮಗೆ ಮುಕ್ತಿ ಇಲ್ಲ. ಮನೆಯ ಎದುರು ಲಿಂಬೆಹಣ್ಣು ನೋಡಿದಾಕ್ಷಣ, ಜ್ಯೋತಿಷಿಗಳ ಮನೆಗೆ ಓಡುವ ಬದಲು ಅದೇ ಲಿಂಬೆ ಹಣ್ಣನ್ನು ಶರಬತ್ತು ಮಾಡಿ ಕುಡಿದ ದಿನ ನಿಜವಾಗಿಯೂ ಅಂಬೇಡ್ಕರ್ ಅವರು ಕಂಡ ಕನಸು ನನಸಾಗುತ್ತದೆ ಎಂದು ಉಡುಪಿ ಜಿಲ್ಲಾ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಶಿಕ್ಷಕರ ಸಂಘದ ಅಧ್ಯಕ್ಷ ನಾರಾಯಣ ಮಣೂರು ಹೇಳಿದ್ದಾರೆ.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಆದಿಉಡುಪಿಯ ಜಿಲ್ಲಾ ಅಂಬೇಡ್ಕರ್ ಭವನದಲ್ಲಿ ನಡೆದ ಭಾರತ ರತ್ನ, ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್‌ರ 130ನೇ ಜನ್ಮದಿನಾಚರಣೆ ‘ಭೀಮ ಹಬ್ಬ’ ಅಂಬೇಡ್ಕರ್ ಗೀತಗಾಯನ ಗೋಷ್ಠಿಯ ಉದ್ಘಾಟನಾ ಸಮಾರಂಭದ ಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು.
ದಲಿತರು, ಶೋಷಿತರಿಗೆ ರಾಜಕೀಯ ಸಮಾನತೆ ತಂದು ಕೊಡುವುದು ಚುನಾವಣೆ. ಈ ಚುನಾವಣೆಯಲ್ಲಿ ನಾವೀಗ ನಮ್ಮನ್ನು ತುಳಿಯುವ ಶಕ್ತಿಗಳಿಗೆ ಮತಗಳ ಮೂಲಕ ಶಕ್ತಿ ತುಂಬುವ ಕೆಲಸ ಮಾಡುತಿದ್ದೇವೆ. ಹೀಗಾಗಿ ಅಂಬೇಡ್ಕರ್ ಅವರ ಆಳುವ ಶಕ್ತಿಗಳಾಗುವ ಕನಸು ಈಗಲೂ ಕನಸಾಗಿಯೇ ಉಳಿದುಕೊಂಡಿದೆ ಎಂದವರು ಅಭಿಪ್ರಾಯ ಪಟ್ಟರು.
ಯಾವತ್ತು ನಾವು ನಮ್ಮ ಮನೆಯಲ್ಲಿರುವ ವೈದಿಕ ದೇವರ ಪೋಟೊಗಳನ್ನು ಕಳಚಿ ದೂರ ಇಡುವ ಧೈರ್ಯ ತೋರುತ್ತೇವೆಯೊ, ಅಂದು ಬಾಬಾ ನಮಗೆ ಹಾಕಿಕೊಟ್ಟ ದಾರಿಯಲ್ಲಿ ನಡೆಯುವ ಸಾಗುವ ದಿಟ್ಟತನವನ್ನು ಸಾಕಾರಗೊಳಿಸುತ್ತೇವೆ ಎಂದು ನಾರಾಯಣ ಮಣೂರು ನುಡಿದರು.
ಅಂಬೇಡ್ಕರ್ ಅವರು ನಮಗೆ ಸಂವಿಧಾನ ಕೊಟ್ಟು ಎಂಟು ದಶಕಗಳು ಕಳೆದ ಮೇಲೂ ದೇಶದಲ್ಲಿ ದಲಿತರ, ಶೋಷಿತರ ಮೇಲಿನ ದೌರ್ಜನ್ಯ ಕಡಿಮೆಯಾಗಿಲ್ಲ. ಅಲ್ಲದೇ ಈ ದೌರ್ಜನ್ಯ ಈಗ ‘ಒಪ್ಪಿತ ದೌರ್ಜನ್ಯ’ಗಳಂತೆ ಕಂಡುಬರತೊಡಗಿದೆ. ಏಕೆಂದರೆ ನಾವಿನ್ನೂ ವೈದಿಕ ಧರ್ಮದ ಗುಲಾಮಗಿರಿಯಲ್ಲಿ, ಬೌದ್ಧಿಕ ದಿವಾಳಿತನದಲ್ಲಿ ಬದುಕುತಿದ್ದೇವೆ ಎಂದವರು ಕಟುವಾಗಿ ನುಡಿದರು.
ಭೀಮಹಬ್ಬವನ್ನು ಉಡುಪಿ ವಿಭಾಗದ ಡಿವೈಎಸ್ಪಿ ಸುಧಾಕರ ಸದಾನಂದ ನಾಯ್ಕಿ ಅವರು ಉದ್ಘಾಟಿಸಿ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಚಿಂತನೆ, ಆದರ್ಶ, ಬದುಕನ್ನು ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು.
ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಣಿಪಾಲ ಎಂಐಟಿಯ ಪ್ರಾಧ್ಯಾಪಕ ಪ್ರೊ.ಫಣಿರಾಜ್, ಎರ್ಮಾಳಿನ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಅಜಯ್‌ಕುಮಾರ್, ಉಡುಪಿಯ ವಕೀಲ ಮಂಜುನಾಥ್ ವಿ., ರಂಗಕರ್ಮಿ ಜಯರಾಂ ನೀಲಾವರ ಗೋಷ್ಠಿಯಲ್ಲಿ ಭಾಗವಹಿಸಿದರು.
ಇದೇ ಸಂದರ್ಭದಲ್ಲಿ ಸಾಧಕರಾದ ಕರುಣಾಕರ ಮಾಸ್ತರ್, ಇದ್ರಿಸ್ ಹೂಡೆ, ಸುಂದರ್ ಗುಜ್ಜರಬೆಟ್ಟು, ವಂ.ವಿಲಿಯಂ ಮಾರ್ಟಿಸ್, ರಾಧಾ ತೊಟ್ಟಂ, ಶೇಖರ್ ಹೆಜಮಾಡಿ, ಗೋಪಾಲಕೃಷ್ಣ ಕುಂದಾಪುರ ಇವರನ್ನು ಸನ್ಮಾನಿಸಲಾಯಿತು.
ಜಿಲ್ಲಾ ಸಂಘಟನಾ ಸಂಚಾಲಕ ಭಾಸ್ಕರ ಮಾಸ್ತರ್ ಅತಿಥಿಗಳನ್ನು ಸ್ವಾಗತಿಸಿದರೆ, ಜಿಲ್ಲಾ ಸಮಿತಿ ಸದಸ್ಯ ಎಸ್.ಎಸ್.ಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ ಕಾರ್ಯಕ್ರಮ ನಿರೂಪಿಸಿದರು.








