ಸಾಸ್ತಾನ: ಅಜ್ಜ-ಅಜ್ಜಿ ನೆನಪಿನಲ್ಲಿ ಕಟ್ಟಿಸಿದ ಬಸ್ ತಂಗುದಾಣಗಳ ಲೋಕಾರ್ಪಣೆ

ಕೋಟ, ಎ.14: ಸಮಾಜಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ತುಡಿತದೊಂದಿಗೆ ಎರಡು ಬಸ್ ತಂಗುದಾಣ ನಿರ್ಮಿಸಿರುವ ಚಂದ್ರಶೇಖರ ಮಯ್ಯ ಅವರ ಕಾರ್ಯ ಶ್ಲಾಘನೀಯ ಎಂದು ಉಡುಪಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಸುಮಾರು 6ಲಕ್ಷ ರೂ ವೆಚ್ಚದಲ್ಲಿ ಸಾಸ್ತಾನ ಪಾಂಡೇಶ್ವರ ತುಂಗರ ಮಠದ ಸಮೀಪ ಹೆಬ್ಬಾಗಿಲು ಮನೆ ದಿ.ನರಸಿಂಹ ತುಂಗ ಇವರ ಸ್ಮರಣಾರ್ಥ ಅವರ ಮೊಮ್ಮಗ ಪತ್ರಿಕಾ ವಿತರಕ ಚಂದ್ರಶೇಖರ ಮಯ್ಯ ಕೊಡುಗೆಯಾಗಿ ನಿರ್ಮಿಸಿದ ಎರಡು ಬಸ್ ತಂಗುದಾಣವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡುತಿದ್ದರು. ದೇವರು ಎಲ್ಲಿದ್ದಾನೆ ಎಂದು ಪ್ರಶ್ನಿಸಿಕೊಂಡಾಗ ಗುಡಿಯಲ್ಲಿ ಮಾತ್ರವಲ್ಲ, ಎಲ್ಲರ ಹೃದಯದಲ್ಲಿ ನೆಲೆ ನಿಂತಿದ್ದಾನೆ. ಅದೇ ರೀತಿ ಮಯ್ಯರು ಮನುಷ್ಯರಿಗಲ್ಲದೆ ಪ್ರಾಣಿ, ಪಶುಪಕ್ಷಿಗಳಿಗೂ ಆಶ್ರಯ ನೀಡುವ ಕಾರ್ಯ ಮಾಡಿರುವುದು ಅವರಲ್ಲಿರುವ ಪರಿಸರ ಪ್ರೇಮವನ್ನು ಸಾಕ್ಷೀಕರಿಸಿದೆ. ಅವರು ತನ್ನ ದುಡಿಮೆಯ ಒಂದು ಪಾಲನ್ನು ಸಮಾಜಕ್ಕೆ ಮೀಸಲಿರಿಸಿದ್ದಾರೆ. ಇದು ದೇವರು ಮೆಚ್ಚುವ ಕಾರ್ಯ ಎಂದು ಸ್ವಾಮೀಜಿ ನುಡಿದರು.
ಸಾಸ್ತಾನ ಸಂತ ಅಂತೋನಿ ಚರ್ಚ್‌ನ ಧರ್ಮಗುರು ವಂ. ಜಾನ್ ವಾಲ್ಟರ ಮೆಂಡೋನ್ಸಾ ಮಾತನಾಡಿ, ಸಾಮರಸ್ಯದ ಬದುಕಿಗೆ ಮಯ್ಯರು ಮುನ್ನುಡಿ ಬರೆದಿದ್ದಾರೆ. ಇನ್ನೊಬ್ಬರಿಗೆ ಸಹಾಯ ನೀಡುವ ಮನಸ್ಥಿತಿ ಬೆಳೆಯಬೇಕು. ಇದನ್ನು ಮಯ್ಯರಲ್ಲಿ ಕಾಣಲು ಸಾಧ್ಯವಾಗಿದೆ ಎಂರು. ನುಡಿಮುತ್ತು ಫಲಕ ಹಾಗೂ ನೀರಿನ ಕುಂಡಲಿ, ಗಿಡ ನೆಡುವ ಕಾರ್ಯ ನಡೆಸಲಾಯಿತು.ಬಸ್ ತಂಗುದಾಣದ ರೂವಾರಿ ಚಂದ್ರಶೇಖರ ಮಯ್ಯ ಹಾಗೂ ಅರ್ಚನಾ ಮಯ್ಯ ಸ್ವಾಮೀಜಿ ಅವರನ್ನು ಸ್ವಾಗತಿಸಿದರು. ವೇದಮೂರ್ತಿ ಮಧುಸೂದನ್ ಬಾಯಿರಿ, ಸುಶೀಲ ಬಾಯಿರಿ, ಐರೋಡಿ ವಾಸುಕಿ ಸುಬ್ರಹ್ಮಣ್ಯ ದೇವಳದ ಸುಬ್ರಹ್ಮಣ್ಯ ಮಧ್ಯಸ್ಥ, ಪಾಂಡೇಶ್ವರ ಗ್ರಾಪಂ ಸದಸ್ಯ ಪ್ರತಾಪ್ ಶೆಟ್ಟಿ ಸಾಸ್ತಾನ, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಕಾರ್ಯದರ್ಶಿ ಐರೋಡಿ ವಿಠ್ಠಲ್ ಪೂಜಾರಿ, ಚೇತನಾ ಪ್ರೌಢಶಾಲಾ ಮುಖ್ಯ ಶಿಕ್ಷಕ ಗಣೇಶ್ ಜಿ., ಹೆದ್ದಾರಿ ಜಾಗೃತಿ ಸಮಿತಿಯ ಪ್ರಶಾಂತ್ ಶೆಟ್ಟಿ, ನಿವೃತ್ತ ಶಿಕ್ಷಕ ಕೆ.ರಾಜಾರಾಮ್ ಐತಾಳ್ ಉಪಸ್ಥಿತರಿದ್ದರು.








