ಪಚ್ಚನಾಡಿ ಪ್ರದೇಶವನ್ನು ‘ಇಕೋ ಸ್ನೇಹಿ ವಲಯ’ವನ್ನಾಗಿಸಲು ಮನವಿ

ಮಂಗಳೂರು, ಎ.14: ಪದೇ ಪದೇ ಚರ್ಚೆಯ ಕೇಂದ್ರ ಬಿಂದುವಾಗುತ್ತಿರುವ ಪಚ್ಚನಾಡಿ ಕಸ ವಿಲೇವಾರಿ ಕೇಂದ್ರವನ್ನು ‘ಇಕೋ ಸ್ನೇಹಿ ವಲಯ’ವನ್ನಾಗಿಸಬೇಕು ಎಂದು ಪಚ್ಚನಾಡಿ ಸಂರಕ್ಷಣಾ ಸಮಿತಿಯು ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ.
ಇತ್ತೀಚೆಗೆ ಸಂಭವಿಸಿದ ದುರಂತವು ಎಲ್ಲರಿಗೂ ಪಾಠವಾಗಬೇಕು. ಯಾಕೆಂದರೆ ಇಲ್ಲಿ ಬೆಂಕಿ ಅವಘಡ ಸಂಭವಿಸಿರುವುದು ಇದು ಮೊದಲನೆಯದಲ್ಲ. ಕಳೆದ ವರ್ಷ ವಿಲೇವಾರಿ ಕೆಂದ್ರದ ಮುಂಭಾಗ ಕಸದ ರಾಶಿಗೆ ಬೆಂಕಿ ಬಿದ್ದಿತ್ತು. ಇದರಿಂದ ದಟ್ಟವಾದ ಹೊಗೆ ಮತ್ತು ಪರಿಸರ ಮಾಲಿನ್ಯದಿಂದಾಗಿ ಸುತ್ತಮುತ್ತಲಿನ ಜನ 3 ದಿನಗಳ ಕಾಲ ಸಂಕಷ್ಟ ಅನುಭವಿಸಿದ್ದರು. ಮೊನ್ನೆಯ ಬೆಂಕಿ ಅವಘಡದಿಂದ ದಟ್ಟ ಹೊಗೆಯು ಪರಿಸರದ ನೂರಾರು ಮನೆಯೊಳಗೆ ಸೇರಿ ಜನರು ಪರದಾಡುವಂತಾಗಿತ್ತು. ಅಲ್ಲದೆ ಅನೇಕ ಮಂದಿ ಉಸಿರಾಟದ ತೊಂದರೆಗೂ ಒಳಗಾಗಿದ್ದಾರೆ. ಈ ವಿಲೇವಾರಿ ಘಟಕದಲ್ಲಿ ಬೆಂಕಿ ಅವಘಡ ಸಂಭವಿಸಿದರೆ ಬೆಂಕಿ ನಂದಿಸಲು ಸಮರ್ಪಕ ವ್ಯವಸ್ಥೆಗಳಿಲ್ಲ. ಸೂಕ್ತ ಬೆಳಕಿನ ವ್ಯವಸ್ಥೆಯೂ ಇಲ್ಲ. ಇಲ್ಲಿ ಪ್ಲಾಸ್ಟಿಕ್ ಜೊತೆಗೆ ರಸಾಯನಿಕ ಪದಾರ್ಥಗಳನ್ನು ಉಪಯೋಗಿಸಿದ ವಸ್ತುಗಳೂ ಬರುತ್ತವೆ. ಇದಕ್ಕೆ ಬೆಂಕಿ ಬಿದ್ದಾಗ ಬರುವ ಹೊಗೆ ಅಪಾಯಕಾರಿಯಾಗಿದೆ. ಇಲ್ಲಿನ ಪೂರ್ಣ ಪ್ರಮಾಣದ ಕಸಕ್ಕೆ ಬೆಂಕಿ ಬಿದ್ದರೆ ಭಾರೀ ಸಾವು ನೋವು ಸಂಭವಿಸಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಹಾಗಾಗಿ ಇಲ್ಲಿ ಜಾಸ್ತಿ ಕಸ ಶೇಖರಣೆ ಮಾಡಬಾರದು. ಕಸದ ರಾಶಿ ಆಗಾಗ ವಿಲೇವಾರಿ ಮಾಡಬೇಕು. ಘಟಕದೊಳಗೆ ಪ್ರಖರ ವಿದ್ಯುತ್ ಬೆಳಕಿನ ವ್ಯವಸ್ಥೆ ಕಲ್ಪಿಸಬೇಕು. ಬೆಂಕಿ ನಂದಿಸಲು ಭಾರೀ ಗಾತ್ರದ ನೀರಿನ ಪೈಪ್ ಜೋಡಿಸಬೇಕು. ಘಟಕದೊಳಗೆ ಸಿಸಿ ಕ್ಯಾಮರಾ ಅಳವಡಿಸಬೇಕು. ಘಟಕದ ಹಿಂಭಾಗದ ಮೈದಾನ ಪ್ರದೇಶಕ್ಕೆ ತಾಗಿಕೊಂಡಿರುವ ಕಾಂಪೌಂಡ್ ಎತ್ತರಿಸಬೇಕು. ಅಗ್ನಿ ಶಾಮಕದಳದ ವಾಹನಗಳು ಘಟಕದೊಳಗೆ ಸರಾಗವಾಗಿ ಹೋಗುವಂತೆ ವ್ಯವಸ್ಥೆ ಮಾಡಬೇಕು. ರಜಾ ದಿನಗಳಲ್ಲಿ ವಿಲೇವಾರಿ ಘಟಕದ ಮೇಲೆ ಕಣ್ಗಾವಲು ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ನಿಯೋಗ ಮನವಿ ಮಾಡಿದೆ.
ಸಮಿತಿಯ ಮುಖಂಡರಾದ ಎಂಜಿ ಹೆಗಡೆ. ಬಿಎಸ್ ಚಂದ್ರು, ಸ್ಟಾನ್ಲಿ ಆಲ್ವಾರಿಸ್, ವೆರೋನಿಕಾ ಪಿಂಟೋ, ಸಂದೇಶ್ ಸಂತೋಷ್ ನಗರ, ಸಜಿತ್ ಸಂತೋಷ್ ನಗರ, ಅಜಿತ್ ವಾಮಂಜೂರು, ಶಿವಪ್ಪ ಪಚ್ಚನಾಡಿ, ವಿಲ್ಸನ್ ವಾಮಂಜೂರು, ನವೀನ್ ಸಂತೋಷ್ ನಗರ, ಹರೀಶ್ ಪಚ್ಚನಾಡಿ ನಿಯೋಗದಲ್ಲಿದ್ದರು.







