ಅಶ್ಲೀಲ ಸೀಡಿ ಪ್ರಕರಣ: ಸಂತ್ರಸ್ತ ಯುವತಿ ಸ್ಪಷ್ಟನೆ

ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ಸೀಡಿ ಪ್ರಕರಣ ಸಂಬಂಧ ಸಂತ್ರಸ್ತ ಯುವತಿ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ನನ್ನ ಹೇಳಿಕೆಗಳಿಗೆ ಬದ್ಧವಾಗಿದ್ದೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಮಂಗಳವಾರ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ಹರಿಬಿಟ್ಟಿದ್ದು, ನಾನು ಒತ್ತಡದಿಂದ ಹೇಳಿಕೆ ನೀಡಿದ್ದೇನೆ ಎಂಬುದು ಸತ್ಯಕ್ಕೆ ದೂರವಾಗಿದೆ. ನ್ಯಾಯಾಧೀಶರ ಮುಂದೆ ಮತ್ತೊಮ್ಮೆ ಹೇಳಿಕೆ ದಾಖಲಿಸಲು ಮನವಿ ಮಾಡಿಲ್ಲ ಎಂದು ಹೇಳಿದ್ದಾರೆ.
ಅಲ್ಲದೆ, ನಾನು ಈ ಹಿಂದೆ ನೀಡಿದ್ದ ಹೇಳಿಕೆಗೆ ಉಲ್ಟಾ ಹೊಡೆದಿದ್ದೇನೆ ಎಂಬುದು ಸತ್ಯಕ್ಕೆ ದೂರವಾಗಿದೆ. ಪೋಷಕರ ಜೊತೆ ಚರ್ಚಿಸಿದ ಬಳಿಕ ಮನಸ್ಸು ಬದಲಾಯಿಸಿಲ್ಲ. ಇನ್ನು, ಸೀಡಿ ಪ್ರಕರಣದಲ್ಲಿ ಆರೋಪಿತರಾದವರಿಗೆ ವಿಚಾರಣೆ ನಡೆಸಿಲ್ಲ. ಅವರ ಕುಟುಂಬದವರಿಗೆ ನೋಟಿಸ್ ಕೊಟ್ಟಿಲ್ಲ. ಆದರೆ, ನಮ್ಮ ಸ್ನೇಹಿತರು, ಸಂಬಂಧಿಕರು, ಕುಟುಂಬದವರಿಗೆ ನೋಟಿಸ್ ಕೊಡಲಾಗಿದೆ ಎಂದು ತಿಳಿಸಿದ್ದಾರೆ.
ವಿಡಿಯೋ ಜೊತೆಗೆ ಪತ್ರ ಬರೆದಿರುವ ಸಂತ್ರಸ್ತ ಯುವತಿ, ಪೋಷಕರ ಜೊತೆ ಚರ್ಚಿಸಿದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಮನಸ್ಸು ಬದಲಾಯಿಸಿಲ್ಲ. ಅದು ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿ ನೀಡಲು ಸಿಟ್(ವಿಶೇಷ ತನಿಖಾ ತಂಡ) ಎದುರು ಹಾಜರಾಗಿದ್ದೆ ವಿನಃ ಬೇರೆ ಉದ್ದೇಶವಿಲ್ಲ ಎಂದು ಹೇಳಿದ್ದಾರೆ.





