ದೇಶದಲ್ಲಿ ದೊಡ್ಡ ಮಟ್ಟದ ಲಾಕ್ ಡೌನ್ ಜಾರಿ ಇಲ್ಲ: ವಿಶ್ವಬ್ಯಾಂಕ್ ಗೆ ತಿಳಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಹೊಸದಿಲ್ಲಿ, ಎ. 14: 2020ರಲ್ಲಿ ಹೇರಿದಂತೆ ದೊಡ್ಡ ಮಟ್ಟದಲ್ಲಿ ಲಾಕ್‌ಡೌನ್ ಹೇರಲು ಸರಕಾರ ಚಿಂತಿಸುತ್ತಿಲ್ಲ. ಸ್ಥಳೀಯ ಕಂಟೈನ್ಮೆಂಟ್‌ಗಳನ್ನು ಆರಂಭಿಸಲು ಆಲೋಚಿಸುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಮಂಗಳವಾರ ವಿಶ್ವ ಬ್ಯಾಂಕ್ ಸಮೂಹದ ಅಧ್ಯಕ್ಷ ಡೇವಿಡ್ ಮಾಲ್‌ಪಾಸ್ ಅವರೊಂದಿಗಿನ ವರ್ಚುವಲ್ ಸಭೆಯಲ್ಲಿ ಮಾತನಾಡಿದ ಅವರು, ಈಗ ದೇಶದಲ್ಲಿ ಪೂರ್ಣ ಪ್ರಮಾಣದಲ್ಲಿ ಲಾಕ್‌ಡೌನ್ ಹೇರುವ ಅವಕಾಶ ಇಲ್ಲ ಎಂದಿದ್ದಾರೆ.
ಅಭಿವೃದ್ಧಿಗಾಗಿ ಹಣಕಾಸು ಲಭ್ಯತೆಯನ್ನು ಉತ್ತೇಜಿಸಲು ಭಾರತಕ್ಕೆ ಸಾಲದ ಅವಕಾಶ ಹೆಚ್ಚಿಸಲು ವಿಶ್ವಬ್ಯಾಂಕ್ ತೆಗೆದುಕೊಂಡ ಕ್ರಮಗಳನ್ನು ಅವರು ಪ್ರಶಂಸಿಸಿದರು.
‘‘ಎರಡನೇ ಅಲೆಯ ಕೊರೋನ ಸೋಂಕನ್ನು ತಡೆಯಲು ಪರೀಕ್ಷೆ, ಪತ್ತೆಹಚ್ಚುವಿಕೆ, ಚಿಕಿತ್ಸೆ, ಲಸಿಕೆ ಹಾಗೂ ಕೋವಿಡ್-19 ನಡತೆ ಎಂಬ ಐದು ಸ್ತಂಭಗಳು ಸೇರಿದಂತೆ ಭಾರತ ತೆಗೆದುಕೊಂಡ ಕ್ರಮಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಂಚಿಕೊಂಡಿದ್ದಾರೆ’’ಎಂದು ಹಣಕಾಸು ಸಚಿವಾಲಯದ ಟ್ವೀಟ್ ಹೇಳಿದೆ.
‘‘ಕೊರೋನದ ಎರಡನೇ ಅಲೆ ಕಂಡು ಬಂದರೂ ದೊಡ್ಡ ಮಟ್ಟದಲ್ಲಿ ಲಾಕ್‌ಡೌನ್ ಹೇರದಿರುವುದರ ಬಗ್ಗೆ ನಾವು ತುಂಬಾ ಸ್ಪಷ್ಟ ನಿಲುವು ಹೊಂದಿದ್ದೇವೆ. ಆರ್ಥಿಕತೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲು ನಾವು ಬಯಸುವುದಿಲ್ಲ. ರೋಗಿಗಳ ಸ್ಥಳೀಯ ಮಟ್ಟದ ಐಸೋಲೇಷನ್, ಕ್ವಾರಂಟೈನ್ ಮಾದರಿಗಳ ಮೂಲಕ ಈ ಬಿಕ್ಕಟ್ಟನ್ನು ನಿರ್ವಹಿಸಲಿದ್ದೇವೆ. ಲಾಕ್‌ಡೌನ್ ಜಾರಿಗೊಳಿಸುವುದಿಲ್ಲ’’ ಎಂದು ಸೀತಾರಾಮನ್ ಹೇಳಿದ್ದಾರೆ.
ನಾಗರಿಕ ಸೇವೆ ಹಾಗೂ ಆರ್ಥಿಕ ವಲಯದ ಸುಧಾರಣೆ, ಜಲಸಂಪನ್ಮೂಲ ನಿರ್ವಹಣೆ ಹಾಗೂ ಆರೋಗ್ಯದ ಕುರಿತ ಇತ್ತೀಚೆಗಿನ ಕಾರ್ಯಕ್ರಮಗಳು ಸೇರಿದಂತೆ ಸಮೂಹ ಹಾಗೂ ಭಾರತದ ನಡುವಿನ ಸಹಭಾಗಿತ್ವದ ಪ್ರಾಮುಖ್ಯತೆ ಕುರಿತು ಮಾಲ್‌ಪಾಸ್ ಹಾಗೂ ನಿರ್ಮಲಾ ಸೀತಾರಾಮನ್ ಚರ್ಚೆ ನಡೆಸಿದ್ದಾರೆ ಎಂದು ವಿಶ್ವಬ್ಯಾಂಕ್‌ನ ಹೇಳಿಕೆ ತಿಳಿಸಿದೆ.