ಕುಂಭಮೇಳಕ್ಕೆ ತೆರಳಿರುವ ಸಿಬ್ಬಂದಿ: ಲಕ್ನೋದ ಚಿತಾಗಾರಗಳಲ್ಲಿ ತುಂಬಿ ತುಳುಕುತ್ತಿರುವ ಕೋವಿಡ್ ನಿಂದ ಮೃತಪಟ್ಟ ದೇಹಗಳು

ಸಾಂದರ್ಭಿಕ ಚಿತ್ರ
ಲಕ್ನೋ, ಎ.14: ಉತ್ತರಪ್ರದೇಶದಲ್ಲಿ ಕಳೆದ 24 ತಾಸುಗಳಲ್ಲಿ 85 ಮಂದಿ ಕೋವಿಡ್ ಸೋಂಕಿನಿಂದ ಸಾವನ್ನಪ್ಪಿದ್ದು, ಆ ಪೈಕಿ 18 ಸಾವುಗಳು ಲಕ್ನೋದಲ್ಲಿ ವರದಿಯಾಗಿವೆ. ರವಿವಾರ ಲಕ್ನೋದ ಚಿತಾಗಾರಕ್ಕೆ 69 ಶವಗಳನ್ನು ಅಂತ್ಯಕ್ರಿಯೆಗಾಗಿ ಶನಿವಾರ ತರಲಾಗಿದ್ದು, ಸಿಬ್ಬಂದಿಯ ಕೊರತೆಯಿಂದಾಗಿ ದೀರ್ಘವಾದ ಸರತಿಯ ಸಾಲು ಕಂಡುಬಂದಿತ್ತೆಂದು ಲಕ್ನೋದ ಮುನ್ಸಿಪಲ್ ಆಯುಕ್ತ ಅಜಯ್ ದ್ವಿವೇದಿ ತಿಳಿಸಿದ್ದಾರೆ.
ಕೆಲವು ಸಿಬ್ಬಂದಿಗಳು ಕುಂಭಮೇಳದಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ, ಇತರ ಕೆಲವು ಸಿಬ್ಬಂದಿ ಸೋಂಕಿಗೊಳಗಾಗುವ ಭೀತಿಯಿಂದ ಮೃತದೇಹಗಳ ವಿಲೇವಾರಿ ಮಾಡಲು ಹಿಂಜರಿಯುತ್ತಿದ್ದಾರೆ ಎಂದರು.
ನಾವು ಸರಾಸರಿ ಪ್ರತಿ ದಿನ 7-8 ಮಂದಿ ಕೋವಿಡ್ ರೋಗಿಗಳ ಮೃತದೇಹಗಳ ಅಂತ್ಯಕ್ರಿಯೆ ನಡೆಸುತ್ತಿದ್ದೇವೆ. ಆದರೆ ಕಳೆದ ಒಂದು ವಾರದಿಂದ ಆ ಸಂಖ್ಯೆಯಲ್ಲಿ 30ರಿಂದ 40ಕ್ಕೇರಿದೆ. ರವಿವಾರದಂದು 69 ಮೃತದೇಹಗಳನ್ನು ಚಿತಾಗಾರಕ್ಕೆ ತರಲಾಗಿತ್ತು. ಎಂದು ಅಜಯ್ ದ್ವಿವೇದಿ ಹೇಳುತ್ತಾರೆ.
ಉತ್ತರಪ್ರದೇಶದಲ್ಲಿ ಪತ್ತೆಯಾದ ಕೊರೋನ ಸೋಂಕಿನ ಪ್ರಕರಣಗಳ ಪೈಕಿ ಶೇ.27ರಷ್ಟು ರಾಜಧಾನಿ ಲಕ್ನೋದಲ್ಲಿ ವರದಿಯಾಗಿದೆ.
ಲಕ್ನೋದಲ್ಲಿ ಎಪ್ರಿಲ್ 1ರಂದು ಕೊರೋನ ಸೋಂಕಿತರ ಒಟ್ಟು ಸಂಖ್ಯೆ 3912 ಆಗಿದ್ದು, ಎಪ್ರಿಲ್ 13ರ ವೇಳೆಗೆ ಅದು 27,385ಕ್ಕೆ ಏರಿಕೆಯಾಗಿದ್ದು, ಶೇ.670 ಹೆಚ್ಚಳವಾಗಿದೆ. ಹಾಗೆಯೇ ರಾಜ್ಯದಲ್ಲಿ ಸಕ್ರಿಯ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ 95,980ಕ್ಕೆ ಏರಿಕೆಯಾಗಿದೆ.
ಆದಿತ್ಯವಾರ ಉತ್ತರಪ್ರದೇಶದಲ್ಲಿ 72 ಮಂದಿ ಕೋವಿಡ್-19 ಸೋಂಕಿತರು ಮೃತಪಟ್ಟಿದ್ದು ಆ ಪೈಕಿ 21 ಸಾವುಗಳು ಲಕ್ನೋದಲ್ಲಿ ಸಂಭವಿಸಿವೆ. ಮಂಗಳವಾರ ಆರೋಗ್ಯ ಇಲಾಖೆ ಪ್ರಕಟಿಸಿದ ಆರೋಗ್ಯ ಬುಲೆಟಿನ್ ತಿಳಿಸಿದೆ.







