ಕೇವಲ ಹತ್ತೇ ದಿನದಲ್ಲಿ ದೇಶದ ಕೋವಿಡ್ ಕೇಸ್ ಗಳು 1ಲಕ್ಷದಿಂದ 2 ಲಕ್ಷಕ್ಕೆ ಏರಿಕೆ !
ಹೊಸದಿಲ್ಲಿ: ಕೋವಿಡ್ ಎರಡನೇ ಅಲೆಯ ಕಪಿಮುಷ್ಠಿಯಲ್ಲಿ ಸಿಲುಕಿರುವ ಭಾರತದಲ್ಲಿ ಎಪ್ರಿಲ್ 4ರಂದು ಕೋವಿಡ್ ಪ್ರಕರಣಗಳು ಒಂದು ಲಕ್ಷ ದಾಟಿದ್ದರೆ ಕೇವಲ ಹತ್ತು ದಿನಗಳ ಅವಧಿಯಲ್ಲಿ, ಎಪ್ರಿಲ್ 14ರಂದು ದೇಶದಲ್ಲಿ ದಿನವೊಂದರಲ್ಲಿ ವರದಿಯಾದ ಕೋವಿಡ್ ಪ್ರಕರಣಗಳ ಸಂಖ್ಯೆ 2 ಲಕ್ಷ ದಾಟಿದೆ. ಎಪ್ರಿಲ್ 14ರಂದು ದೇಶದಲ್ಲಿ ಒಟ್ಟು 2,00,793 ಕೋವಿಡ್ ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಸಚಿವಾಲಯ ಬಿಡುಗಡೆಗೊಳಿಸಿದ ಮಾಹಿತಿ ತಿಳಿಸಿದೆ.
ಅಮೆರಿಕಾದಲ್ಲಿ ಕಳೆದ ವರ್ಷದ ಅಕ್ಟೋಬರ್ 30ರಂದು ಕೋವಿಡ್ ಪ್ರಕರಣಗಳ ಸಂಖ್ಯೆ ಒಂದು ಲಕ್ಷ ಗಡಿ ದಾಟಿದ್ದರೆ ನವೆಂಬರ್ 20ರಂದು ಅಲ್ಲಿ ದಿನವೊಂದರಲ್ಲಿ ವರದಿಯಾದ ಪ್ರಕರಣಗಳು ಎರಡು ಲಕ್ಷ ದಾಟಿತ್ತು, ಅಂದರೆ ಅಮೆರಿಕಾದಲ್ಲಿ ಕೋವಿಡ್ ಪ್ರಕರಣಗಳು ಸುಮಾರು 20 ದಿನಗಳಲ್ಲಿ ದ್ವಿಗುಣಗೊಂಡಿದ್ದರೆ ಭಾರತದಲ್ಲಿ ಕೇವಲ ಹತ್ತು ದಿನದಲ್ಲಿ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿದೆ.
ಎಪ್ರಿಲ್ 4ರಿಂದ 14ರ ತನಕ ಭಾರತದಲ್ಲಿ ಪ್ರತಿ ದಿನ ಒಂದು ಲಕ್ಷಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಆದರೆ ಎಪ್ರಿಲ್ 5 ಹಾಗೂ 12ರಂದು ಪ್ರಕರಣಗಳ ಸಂಖ್ಯೆ ಕಡಿಮೆಯಿತ್ತು. ಇದಕ್ಕೆ ಕಾರಣ ಭಾನುವಾರಗಳಂದು ನಡೆದ ಕಡಿಮೆ ಕೋವಿಡ್ ಪರೀಕ್ಷೆಗಳ ಸಂಖ್ಯೆ ಆಗಿದೆ.
ಕಳೆದ ಐದು ದಿನಗಳಲ್ಲಿ ಭಾರತದಲ್ಲಿ ಪ್ರತಿ ದಿನ 1.5 ಲಕ್ಷಕ್ಕೂ ಅಧಿಕ ಕೋವಿಡ್ ಪ್ರಕರಣಗಳು ವರದಿಯಾಗಿವೆ. ಎಪ್ರಿಲ್ 13 ಹಾಗೂ 14ರಂದು 1,000ಕ್ಕೂ ಅಧಿಕ ಮಂದಿ ಕೋವಿಡ್‍ನಿಂದ ಮೃತಪಟ್ಟಿದ್ದಾರೆ.
ಎಪ್ರಿಲ್ 4ರಿಂದ 14ರ ತನಕ ಸುಮಾರು 8 ಲಕ್ಷ ಕೋವಿಡ್ ರೋಗಿಗಳು ಚೇತರಿಸಿಕೊಂಡಿದ್ದಾರೆ. ಆದರೆ ಈ ಅವಧಿಯಲ್ಲಿ ದೇಶದಲ್ಲಿ ಒಟ್ಟು 15 ಲಕ್ಷ ಕೋವಿಡ್ ಪ್ರಕರಣಗಳು ವರದಿಯಾಗಿವೆ. ದೇಶದಲ್ಲಿ ಎಪ್ರಿಲ್ 4ರಂದು ಒಟ್ಟು 7.37 ಲಕ್ಷ ಸಕ್ರಿಯ ಪ್ರಕರಣಗಳಿದ್ದರೆ ಎಪ್ರಿಲ್ 14ರಂದು ಈ ಸಂಖ್ಯೆ 16.66 ಲಕ್ಷಕ್ಕೆ ಏರಿಕೆಯಾಗಿದೆ.