ಇಸ್ರೋ ಬೇಹುಗಾರಿಕೆ ಪ್ರಕರಣ: ಪೊಲೀಸ್ ಅಧಿಕಾರಿಗಳ ಪಾತ್ರದ ತನಿಖೆ ನಡೆಸುವಂತೆ ಸಿಬಿಐಗೆ ಸುಪ್ರೀಂ ಸೂಚನೆ

ಹೊಸದಿಲ್ಲಿ, ಎ. 15: 1994ರ ಇಸ್ರೋ ಬೇಹುಗಾರಿಕೆ ಪ್ರಕರಣದಲ್ಲಿ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರನ್ನು ಸಿಲುಕಿಸುವಲ್ಲಿ ಕೇರಳ ಪೊಲೀಸ್ ಅಧಿಕಾರಿಗಳ ಪಾತ್ರದ ಬಗ್ಗೆ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಗುರುವಾರ ಸಿಬಿಐಗೆ ಆದೇಶಿಸಿದೆ.
ಸುಪ್ರೀಂ ಕೋರ್ಟ್ನ ಮಾಜಿ ನ್ಯಾಯಮೂರ್ತಿ ಡಿ.ಕೆ. ಜೈನ್ ನೇತೃತ್ವದ ಸಮಿತಿಯ ವರದಿಯನ್ನು ನ್ಯಾಯಮೂರ್ತಿ ಎ.ಎಂ. ಖಾನ್ವಿಲ್ಕರ್ ನೇತೃತ್ವದ ನ್ಯಾಯ ಪೀಠ ಸ್ವೀಕರಿಸಿತು ಹಾಗೂ ಮುಂದಿನ ತನಿಖೆ ನಡೆಸುವಂತೆ ಸಿಬಿಐಗೆ ಸೂಚಿಸಿತು. ಈ ಪ್ರಕರಣ ತುಂಬಾ ಗಂಭೀರವಾದುದು. ಆದುದರಿಂದ ಸಿಬಿಐ ತನಿಖೆಯ ಅಗತ್ಯತೆ ಇದೆ ಎಂದು ನ್ಯಾಯಾಲಯ ಹೇಳಿತು.
ಈ ಪ್ರಕರಣದ ತನಿಖೆಯ ಉಸ್ತುವಾರಿ ವಹಿಸುವಂತೆ ಹಾಗೂ ಮುಂದಿನ ತನಿಖೆ ನಡೆಸಲು ನ್ಯಾಯಮೂರ್ತಿ ಜೈನ್ ಸಮಿತಿಯ ವರದಿಯನ್ನು ಪ್ರಾಥಮಿಕ ತನಿಖಾ ವರದಿ ಎಂದು ಪರಿಗಣಿಸುವಂತೆ ನ್ಯಾಯಪೀಠ ಸಿಬಿಐಯ ನಿರ್ದೇಶಕರಿಗೆ ಸೂಚಿಸಿತು.
ತನಿಖೆಯ ಕುರಿತು ಮೂರು ತಿಂಗಳ ಒಳಗೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ ಹಾಗೂ ಕೃಷ್ಣ ಮುರಾರಿ ಅವರನ್ನು ಕೂಡ ಒಳಗೊಂಡ ನ್ಯಾಯಪೀಠ ಸಿಬಿಐಗೆ ತಿಳಿಸಿತು. ಸಮಿತಿಯ ವರದಿಯನ್ನು ಮೊಹರು ಮಾಡಿದ ಲಕೋಟೆಯಲ್ಲಿ ಗೌಪ್ಯವಾಗಿ ಇರಿಸಬೇಕು ಎಂದು ಕೂಡ ಸುಪ್ರೀಂ ಕೋರ್ಟ್ ಆದೇಶಿಸಿತು. 1994ರಲ್ಲಿ ಪಾಕಿಸ್ತಾನದ ಗೂಢಚರರಾಗಿದ್ದರು ಎಂದು ಆರೋಪಿಸಿದ ಕೇರಳ ಪೊಲೀಸ್ ಅಧಿಕಾರಿಗಳ ವಿರುದ್ಧ 79ರ ಹರೆಯದ ಇಸ್ರೋ ವಿಜ್ಞಾನಿ ನಂಬಿ ನಾರಾಯಣನ್ ಅವರು ಕಾನೂನು ಹೋರಾಟ ನಡೆಸುತ್ತಿದ್ದಾರೆ.
ಈ ಬಗ್ಗೆ ಸುಪ್ರೀಂ ಕೋರ್ಟ್ ತನಿಖೆಗೆ ಹಿಂದೆ ಸಮಿತಿಯೊಂದನ್ನು ರೂಪಿಸಿತ್ತು. ಅಲ್ಲದೆ, ಅವಮಾನ ಮಾಡಿದ ಕಾರಣಕ್ಕೆ ನಂಬಿ ನಾರಾಯಣನ್ ಅವರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಕೇರಳ ಸರಕಾರಕ್ಕೆ ನಿರ್ದೇಶಿಸಿತ್ತು.