ರಾಮ ಮಂದಿರಕ್ಕೆ ದೇಣಿಗೆ ನೀಡಿದ್ದ 15 ಸಾವಿರ ಚೆಕ್ ಬೌನ್ಸ್!

Photo source: PTI
ಅಯೋಧ್ಯೆ, ಎ.16: ರಾಮ ಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ಸಂಗ್ರಹಿಸಿದ್ದ 22 ಕೋಟಿ ರೂಪಾಯಿ ಮೌಲ್ಯದ 15 ಸಾವಿರ ಚೆಕ್ಗಳು ಬೌನ್ಸ್ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ ಎಂದು 'The New Indian Express' ವರದಿ ಮಾಡಿದೆ.
ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ರಚಿಸಿರುವ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರದ ಲೆಕ್ಕ ಪರಿಶೋಧನಾ ವರದಿಯ ಪ್ರಕಾರ, ಚೆಕ್ ನೀಡಿದವರ ಬ್ಯಾಂಕ್ ಖಾತೆಯಲ್ಲಿ ಹಣವಿಲ್ಲದೇ ಅಥವಾ ತಾಂತ್ರಿಕ ಕಾರಣದಿಂದಾಗಿ ಈ ಚೆಕ್ಗಳು ಬೌನ್ಸ್ ಆಗಿವೆ ಎನ್ನಲಾಗಿದೆ.
ತಾಂತ್ರಿಕ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಬ್ಯಾಂಕ್ಗಳ ಜತೆಗೆ ಕಾರ್ಯನಿರ್ವಹಿಸಲಾಗುತ್ತಿದ್ದು, ಬೌನ್ಸ್ ಆದ ಚೆಕ್ಗಳನ್ನು ನೀಡಿದ ಜನರು ಮತ್ತೆ ದೇಣಿಗೆ ನೀಡುವಂತೆ ಮನವಿ ಮಾಡಲಾಗುತ್ತಿದೆ ಎಂದು ಟ್ರಸ್ಟ್ ಸದಸ್ಯ ಡಾ.ಅನಿಲ್ ಮಿಶ್ರಾ ಹೇಳಿದ್ದಾರೆ. ಬೌನ್ಸ್ ಆದ ಚೆಕ್ಗಳಲ್ಲಿ ಸುಮಾರು 2,000 ಚೆಕ್ಗಳು ಅಯೋಧ್ಯೆಯಿಂದ ಸಂಗ್ರಹವಾದವುಗಳು.
ಜನವರಿ 15ರಿಂದ ಫೆಬ್ರವರಿ 17ರವರೆಗೆ ದೇಶವ್ಯಾಪಿ ಅಭಿಯಾನ ನಡೆಸಿ ವಿಶ್ವ ಹಿಂದೂ ಪರಿಷತ್ ದೇಣಿಗೆ ಸಂಗ್ರಹಿಸಿತ್ತು. ಈ ಅಭಿಯಾನದಲ್ಲಿ ಸುಮಾರು 5,000 ಕೋಟಿ ರೂ. ಸಂಗ್ರಹವಾಗಿದೆ ಎಂದು ಹೇಳಲಾಗಿದ್ದು, ಅಂತಿಮ ಅಂಕಿಅಂಶಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ.