ವ್ಯಾಪಿಸುತ್ತಿರುವ ಕೋವಿಡ್: ಕುಂಭ ಮೇಳದಿಂದ ಹೊರ ನಡೆಯಲು ನಿರ್ಧರಿಸಿದ ನಿರಂಜನಿ ಅಖಾಡಾ

ಹರಿದ್ವಾರ್: ಹದಗೆಡುತ್ತಿರುವ ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯನ್ನು ಪರಿಗಣಿಸಿ ಈ ವರ್ಷದ ಕುಂಭ ಮೇಳದಿಂದ ಹೊರ ನಡೆಯುವುದಾಗಿ ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭ ಮೇಳದಲ್ಲಿ ಭಾಗಿಯಾಗಿರುವ ಸಾಧು ಸಂತರ 13 ಅಖಾಡಾಗಳ ಪೈಕಿ ಒಂದಾಗಿರುವ ನಿರಂಜನಿ ಅಖಾಡಾ ತಿಳಿಸಿದೆ.
"ಎಪ್ರಿಲ್ 14ರಂದು ಮೇಷ ಸಂಕ್ರಾಂತಿಯ ಸಂದರ್ಭ ನಡೆದ ಪ್ರಮುಖ ಶಾಹಿ ಸ್ನಾನ ಸಂಪನ್ನಗೊಂಡಿದೆ, ನಮ್ಮ ಅಖಾಡಾದಲ್ಲಿನ ಹಲವರಿಗೆ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡಿವೆ, ಆದುದರಿಂದ ನಮ್ಮ ಪಾಲಿಗೆ ಕುಂಭ ಮೇಳ ಮುಕ್ತಾಯಗೊಂಡಿದೆ" ಎಂದು ನಿರಂಜನಿ ಅಖಾಡಾ ಕಾರ್ಯದರ್ಶಿ ರವೀಂದ್ರ ಪುರಿ ಹೇಳಿದ್ದಾರೆ.
ಆದರೆ ಸಂಪೂರ್ಣ ಕುಂಭ ಮೇಳವನ್ನು ಅಂತ್ಯಗೊಳಿಸುವ ಅಂತಿಮ ನಿರ್ಧಾರವನ್ನು ಅಖಾರ ಪರಿಷದ್ ಮಾತ್ರ ಕೈಗೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.
ಅಖಾಡಾ ಪರಿಷದ್ ಅಧ್ಯಕ್ಷ ನರೇಂದ್ರ ಗಿರಿ ಅವರಿಗೆ ಸೋಂಕು ತಗಲಿದ್ದು ರಿಷಿಕೇಶದಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೊಂದೆಡೆ ಮಧ್ಯ ಪ್ರದೇಶದ ಮಹಾ ನಿರ್ವಾಣಿ ಅಖಾಡಾದ ಮುಖ್ಯ ಸಂತ ಕಪಿಲ್ ದೇವ್ ಎಪ್ರಿಲ್ 13ರಂದು ಕೋವಿಡ್‍ಗೆ ಬಲಿಯಾಗಿದ್ದಾರೆ.
ದೇಶದೆಲ್ಲೆಡೆ ಕೋವಿಡ್ ಎರಡನೇ ಅಲೆಯ ಆರ್ಭಟ ವ್ಯಾಪಕವಾಗಿರುವಾಗ ಲಕ್ಷಾಂತರ ಭಕ್ತರು ಭಾಗವಹಿಸುತ್ತಿರುವ ಕುಂಭ ಮೇಳದ ಅವಧಿಯನ್ನು ಕಡಿತಗೊಳಿಸುವ ಸಾಧ್ಯತೆಯನ್ನು ಉತ್ತರಾಖಂಡ ಸರಕಾರ ಗುರುವಾರ ಅಲ್ಲಗಳೆದಿದೆ.
ಕೇಂದ್ರ ಸರಕಾರ ಇನ್ನೂ ಈ ಕುರಿತು ಪ್ರತಿಕ್ರಿಯಿಸಿಲ್ಲ.
ಹರಿದ್ವಾರದಲ್ಲಿ ಗುರುವಾರ 613 ಮಂದಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದು ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆಂದು ಅಧಿಕೃತ ಅಂಕಿಅಂಶಗಳು ತಿಳಿಸಿವೆ.
ಗುರುವಾರದ ತನಕ ಜಿಲ್ಲೆಯಲ್ಲಿ 3,612 ಸಕ್ರಿಯ ಪ್ರಕರಣಗಳಿದ್ದವು.