ಅರಬಿ ಸಮುದ್ರದಲ್ಲಿ ಬೋಟ್ ದುರಂತ: ಮೂವರು ಮೀನುಗಾರರ ಮೃತದೇಹ ಪತ್ತೆ
ಇತರ 6 ಮಂದಿಯ ಪತ್ತೆಗಾಗಿ ಮುಂದುವರಿದ ಶೋಧ

ಸಾಂದರ್ಭಿಕ ಚಿತ್ರ
ಮಂಗಳೂರು, ಎ.16: ಸುರತ್ಕಲ್ ಲೈಟ್ಹೌಸ್ನಿಂದ ಸುಮಾರು 42 ನಾಟಿಕಲ್ ಮೈಲ್ ದೂರದ ಅರಬಿ ಸಮುದ್ರದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಬೋಟ್ ದುರಂತದಲ್ಲಿ ನಾಪತ್ತೆಯಾಗಿರುವ ಒಂಭತ್ತು ಮೀನುಗಾರರ ಪೈಕಿ ಮೂವರು ಮೀನುಗಾರರ ಮೃತದೇಹ ಶುಕ್ರವಾರ ಮುಸ್ಸಂಜೆ ಪತ್ತೆಯಾಗಿದೆ. ಉಳಿದ 6 ಮಂದಿಯ ಪತ್ತೆಗಾಗಿ ಕೋಸ್ಟ್ ಗಾರ್ಡ್ ಹಾಗೂ ಕರಾವಳಿ ಕಾವಲು ಪೊಲೀಸ್ ಪಡೆಯ ಶೋಧ ಕಾರ್ಯಾಚರಣೆಯು ಮುಂದುವರಿದಿದೆ.
ಶುಕ್ರವಾರ ಮುಸ್ಸಂಜೆ ‘ಐಎನ್ಎಸ್ ನಿರ್ದೇಶಕ್’ ಎಂಬ ಹಡಗಿನಲ್ಲಿ ಕಾರ್ಯಾಚರಣೆ ಮಾಡುವಾಗ ಮೂರು ಮೃತದೇಹಗಳು ಸಿಕ್ಕಿವೆ. ತಕ್ಷಣ ಎನ್ಎಂಪಿಟಿ ಬಂದರಿಗೆ ಅವುಗಳನ್ನು ತಂದು ಕರಾವಳಿ ಕಾವಲು ಪೊಲೀಸ್ ಪಡೆಗೆ ಹಸ್ತಾಂತರ ಪ್ರಕ್ರಿಯೆ ನಡೆಸಲಾಗಿದೆ. ನಾಲ್ಕು ದಿನಗಳಿಂದ ಈ ಮೃತದೇಹಗಳು ನೀರಿನಲ್ಲಿದ್ದ ಕಾರಣ ಗುರುತು ಪತ್ತೆ ಕಾರ್ಯ ಕಷ್ಟಕರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದುರಂತದಲ್ಲಿ ಮೃತಪಟ್ಟ ಮೂವರ ಮೃತದೇಹವನ್ನು ತಮಿಳುನಾಡು ಹಾಗೂ ಪಶ್ಚಿಮ ಬಂಗಾಳಕ್ಕೆ ಸಾಗಿಸಲಾಗಿದ್ದರೆ, ರಕ್ಷಿಸಲ್ಪಟ್ಟ ಇಬ್ಬರನ್ನು ಕೂಡ ಅವರ ತವರೂರಿಗೆ ಕಳುಹಿಸಲಾಗಿದೆ. ಕರಾವಳಿ ಕಾವಲು ಪೊಲೀಸ್ ಪಡೆ ಸಹಿತ ಕೋಸ್ಟ್ಗಾರ್ಡ್, ಕಾರವಾರದ ನೌಕನೆಲೆಯ ಹಡಗು, ಹೆಲಿಕಾಪ್ಟರ್ ಮೂಲಕ ಕೂಡ ಶೋಧ ಮಾಡಲಾಗುತ್ತಿದೆ. ಕೇರಳದ ನಾಲ್ಕೈದು ಬೋಟ್ಗಳು ಕೂಡ ನಿರಂತರ ಶೋಧ ಕಾರ್ಯ ನಡೆಸಿದೆ. ದುರಂತ ನಡೆದ ನಾಲ್ಕು ದಿನಗಳ ಬಳಿಕ ಎರಡು ಮೃತದೇಹಗಳು ಪತ್ತೆಯಾಗಿದ್ದರೆ, ಉಳಿದ 7 ಮಂದಿಗಾಗಿ ನಿರಂತರ ಹುಡುಕಾಟ ನಡೆಸಲಾಗುತ್ತಿದೆ.
ನಾಪತ್ತೆಯಾದ ಮೀನುಗಾರರ ಕುಟುಂಬದ ಸದಸ್ಯರು ಮಂಗಳೂರು ಕಡೆಗೆ ಪ್ರಯಾಣ ಬೆಳೆಸಿದ್ದು, ನಾಪತ್ತೆಯಾದವರ ಕುರಿತು ಮತ್ತಷ್ಟು ವಿವರಗಳನ್ನು ಪಡೆಯಲು ಪ್ರಯತ್ನಿಸಲಾಗುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.







