ಛತ್ತೀಸ್ ಗಡ: ಇಬ್ಬರು ಪೊಲೀಸರನ್ನು ಭೀಕರವಾಗಿ ಹತ್ಯೆಗೈದ ಅಪರಿಚಿತ ದುಷ್ಕರ್ಮಿಗಳು

ಸಾಂದರ್ಭಿಕ ಚಿತ್ರ
ಸುಕ್ಮಾ,ಎ.16: ಛತ್ತೀಸ್ಗಡದ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ಅಪರಿಚಿತ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಇಬ್ಬರು ಪೊಲೀಸರನ್ನು ಹತ್ಯೆಗೈದಿದ್ದಾರೆ.
ಗುರುವಾರ ಸಂಜೆ ಭೆಜ್ಜಿ ಗ್ರಾಮದ ಹೊರವಲಯದಲ್ಲಿ ಕಾನ್ ಸ್ಟೇಬಲ್ ಗಳಾದ ಧನಿರಾಮ ಕಶ್ಯಪ್ ಮತ್ತು ಪುನೆಮ್ ಹಾದ್ಮಾ ಅವರ ಶವಗಳು ಪತ್ತೆಯಾಗಿದ್ದು, ಮಾಹಿತಿ ತಿಳಿದ ತಕ್ಷಣ ಪೊಲೀಸ್ ತಂಡವು ಸ್ಥಳಕ್ಕೆ ಧಾವಿಸಿ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಿತು ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.
ಭೆಜ್ಜಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಕಾನ್ ಸ್ಟೇಬಲ್ ಗಳು ಗುರುವಾರ ಅಪರಾಹ್ನ ಬೈಕ್ನಲ್ಲಿ ದಿನಸಿ ಅಂಗಡಿಯೊಂದಕ್ಕೆ ತೆರಳಿದ್ದರು. ಬಳಿಕ ಅವರು ಶವಗಳಾಗಿ ಪತ್ತೆಯಾಗಿದ್ದು, ಸಮೀಪದಲ್ಲಿಯೇ ಬೈಕ್ ಬಿದ್ದಿತ್ತು ಎಂದ ಅವರು, ಸ್ಥಳದಲ್ಲಿ ಯಾವುದೇ ಮಾವೋವಾದಿ ಕರಪತ್ರಗಳು ಪತ್ತೆಯಾಗಿಲ್ಲ, ಹೀಗಾಗಿ ಮೇಲ್ನೋಟಕ್ಕೆ ಹತ್ಯೆಗಳಲ್ಲಿ ನಕ್ಸಲರ ಕೈವಾಡವಿದ್ದಂತೆ ಕಂಡು ಬರುತ್ತಿಲ್ಲ. ತಮಗೆ ಗೊತ್ತಿದ್ದವರಿಂದಲೇ ಅವರ ಹತ್ಯೆಯಾಗಿರುವ ಸಾಧ್ಯತೆಯಿದೆ. ಆದರೂ ವೈಯಕ್ತಿಕ ದ್ವೇಷ ಸೇರಿದಂತೆ ಎಲ್ಲ ಕೋನಗಳಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದರು.
ತನ್ಮಧ್ಯೆ ಭದ್ರತಾ ಪಡೆಗಳು ಹಂತಕರಿಗಾಗಿ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿವೆ.