ಸುಪ್ರೀಂ ಕೋರ್ಟ್ ನಿಂದ ಈ.ಡಿ. ಪ್ರಕರಣಗಳಲ್ಲಿ ಎಸ್ಪಿಪಿಗಳಾಗಿ ಮಣಿಂದರ್ ಸಿಂಗ್, ರಾಜೇಶ್ ಬಾತ್ರಾ ನೇಮಕ
ಕಲ್ಲಿದ್ದಲು ಹಗರಣ

ಹೊಸದಿಲ್ಲಿ,ಎ.16: ಜಾರಿ ನಿರ್ದೇಶನಾಲಯ (ಈ.ಡಿ)ವು ದಾಖಲಿಸಿರುವ ಬಹುಕೋಟಿ ರೂ.ಗಳ ಕಲ್ಲಿದ್ದಲು ಹಗರಣ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ಸರಕಾರಿ ಅಭಿಯೋಜಕ (ಎಸ್ಪಿಪಿ)ರನ್ನಾಗಿ ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಮಣಿಂದರ್ ಸಿಂಗ್ ಮತ್ತು ನ್ಯಾಯವಾದಿ ರಾಜೇಶ ಬಾತ್ರಾ ಅವರನ್ನು ಸರ್ವೋಚ್ಚ ನ್ಯಾಯಾಲಯವು ನೇಮಕಗೊಳಿಸಿದೆ.
2014ರಲ್ಲಿ ಸರ್ವೋಚ್ಚ ನ್ಯಾಯಾಲಯದಿಂದ ಎಸ್ಪಿಪಿಯಾಗಿ ನೇಮಕಗೊಂಡಿದ್ದ ಹಿರಿಯ ನ್ಯಾಯವಾದಿ ಆರ್.ಎಸ್.ಚೀಮಾ ಅವರು ತನ್ನ ವಯಸ್ಸು ಮತ್ತು ತನಗೆ ನೆರವಾಗುವ ಕಾನೂನು ಅಧಿಕಾರಿಗಳ ಕೊರತೆಯನ್ನು ಉಲ್ಲೇಖಿಸಿ ಹುದ್ದೆಯಿಂದ ತನ್ನನ್ನು ಮುಕ್ತಗೊಳಿಸುವಂತೆ ಕೋರಿದ್ದರು.
ಕಲ್ಲಿದ್ದಲು ಗಣಿ ಹಂಚಿಕೆ ವಿಷಯಗಳಿಗೆ ಸಂಬಂಧಿಸಿದಂತೆ ಅಕ್ರಮ ಹಣ ವಹಿವಾಟು ತಡೆ ಕಾಯ್ದೆ,2002ರಡಿ ಪ್ರಕರಣಗಳಲ್ಲಿ ವಾದಿಸಲು ನೂತನ ಎಸ್ಪಿಪಿ ನೇಮಕಕ್ಕೆ ಸೂಕ್ತ ನಿರ್ದೇಶಗಳನ್ನು ಕೋರಿ ಈ.ಡಿ.ಸಲ್ಲಿಸಿದ್ದ ಅರ್ಜಿಯ ಕುರಿತು ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರ ನೇತೃತ್ವದ ಪೀಠವು ನೇಮಕಾತಿ ಆದೇಶವನ್ನು ಹೊರಡಿಸಿದೆ.
ಕಲ್ಲಿದ್ದಲು ಹಗರಣದಲ್ಲಿ 2014ರಿಂದಲೂ ಬಾಕಿಯುಳಿದಿರುವ ಪ್ರಕರಣಗಳ ವಿಚಾರಣೆಗಾಗಿ ವಿಶೇಷ ನ್ಯಾಯಾಧೀಶ ಭರತ ಪರಾಶರ ಅವರ ಬದಲಿಗೆ ನ್ಯಾಯಾಂಗ ಅಧಿಕಾರಿಗಳಾದ ಅರುಣ ಭಾರದ್ವಾಜ ಮತ್ತು ಸಂಜಯ ಬನ್ಸಾಲ್ ಅವರನ್ನು ವಿಶೇಷ ನ್ಯಾಯಾಧೀಶರನ್ನಾಗಿ ನೇಮಕಗೊಳಿಸಲು ಸರ್ವೋಚ್ಚ ನ್ಯಾಯಾಲಯವು ಎ.5ರಂದು ನಿರ್ಧರಿಸಿತ್ತು. ಪರಾಶರ ಅವರು 41 ಪ್ರಕರಣಗಳಲ್ಲಿ ವಿಚಾರಣೆಗಳನ್ನು ನಡೆಸುತ್ತಿದ್ದರು.





