ಕಟೀಲು ಬಸ್ ತಂಗುದಾಣ ಉದ್ಘಾಟನಾ ಕಾರ್ಯಕ್ರಮ: ಕೋವಿಡ್-19 ನಿಯಮ ಉಲ್ಲಂಘನೆ ಆರೋಪ
ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್

ಮಂಗಳೂರು, ಎ.16: ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 92 ಲಕ್ಷ ರೂ.ವೆಚ್ಚದ ಪಾರ್ಕಿಂಗ್ ಸ್ಥಳ, ಕಟೀಲಿನ ಲಕ್ಷ್ಮಿ ನಾರಾಯಣ ಮಂದಿರದಿಂದ ಕಟೀಲುವರೆಗೆ 37 ಲಕ್ಷ ರೂ. ವೆಚ್ಚದ ಫುಟ್‌ಪಾತ್ ಉದ್ಘಾಟನೆ ಹಾಗೂ ಕಟೀಲಿನಲ್ಲಿ ನೂತನವಾಗಿ ಬಸ್ ತಂಗುದಾಣ ಉದ್ಘಾಟನೆಯು ಶುಕ್ರವಾರ ನಡೆಯಿತು.
ಬಿಜೆಪಿ ರಾಜ್ಯಾಧ್ಯಕ್ಷರೂ ಆಗಿರುವ ಸಂಸದ ನಳಿನ್ ಕುಮಾರ್ ಕಟೀಲ್ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿದರು. ಬಸ್ ತಂಗುದಾಣದ ಉದ್ಘಾಟನೆಯ ಬಳಿಕ ಜನಪ್ರತಿನಿಧಿಗಳ ಸಹಿತ ಅತಿಥಿಗಳು ನೂತನ ಬಸ್ ತಂಗುದಾಣದಲ್ಲಿ ಕುಳಿತಾಗ ತೆಗೆದ ಫೋಟೊವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಬಸ್ ತಂಗುದಾಣದಲ್ಲಿ ‘ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ. ನಿಮ್ಮನ್ನು ಮತ್ತು ಇತರರನ್ನೂ ರಕ್ಷಿಸಿ!’ಎಂಬ ಬರಹವನ್ನು ಕಾಣಬಹುದಾಗಿದೆ. ಆದರೆ ಬಸ್ ತಂಗುದಾಣದಲ್ಲಿ ಕುಳಿತ ಜನಪ್ರತಿನಿಧಿಗಳ ಸಹಿತ ಗಣ್ಯರಲ್ಲಿ ಸುರಕ್ಷಿತ ಅಂತರವೇ ಇರಲಿಲ್ಲ. ಎಲ್ಲರೂ ಪರಸ್ಪರ ಭುಜ ತಾಗಿಸಿಕೊಂಡು ಕುಳಿತಿದ್ದರು. ಕೆಲವರು ಮಾಸ್ಕ್ ಧರಿಸಿದ್ದರೆ ಇನ್ನು ಕೆಲವರಲ್ಲಿ ಮಾಸ್ಕ್ ಇರಲಿಲ್ಲ. ಒಟ್ಟಿನಲ್ಲಿ ಕೋವಿಡ್ -19 ನಿಯಮವನ್ನು ಈ ಕಾರ್ಯಕ್ರಮದಲ್ಲಿ ಸ್ಪಷ್ಟವಾಗಿ ಉಲ್ಲಂಘಿಸಲಾಗಿತ್ತು. ಇವರ ವಿರುದ್ಧ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳುತ್ತೀರಿ? ಎಂದು ನೆಟ್ಟಿಗರು ಪ್ರಶ್ನಿಸತೊಡಗಿದ್ದಾರೆ.
ಸುರಕ್ಷಿತ ಅಂತರವೂ ಇಲ್ಲದೆ, ಕೋವಿಡ್ ನಿಯಮವನ್ನು ಉಲ್ಲಂಘಿಸಿದವರ ಪೈಕಿ ಶಾಸಕ ಉಮಾನಾಥ ಕೋಟ್ಯಾನ್, ಜಿಪಂ ಉಪಾಧ್ಯಕ್ಷೆ ಕಸ್ತೂರಿ ಪಂಜ, ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ, ಕಟೀಲು ದೇವಸ್ಥಾನದ ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಸನತ್ ಕುಮಾರ್ ಶೆಟ್ಟಿ, ಆರ್ಚಕ ಹರಿ ಆಸ್ರಣ್ಣ, ಆದರ್ಶ ಶೆಟ್ಟಿ ಎಕ್ಕಾರು ಮತ್ತಿತರರು ಸೇರಿದ್ದಾರೆ.







