ಈ ವರ್ಷ ವಾಡಿಕೆಯಂತೆ ಮುಂಗಾರು ಮಳೆ ಸಾಧ್ಯತೆ: ಹವಾಮಾನ ಇಲಾಖೆ
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ,ಎ.16: ಈ ವರ್ಷ ದೇಶದಲ್ಲಿ ವಾಡಿಕೆಯಂತೆ ಮುಂಗಾರು ಮಳೆಯಾಗುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆಯು ಶುಕ್ರವಾರ ತಿಳಿಸಿದೆ.
ಜೂನ್ನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ದೀರ್ಘಾವಧಿ ಸರಾಸರಿಯ ಶೇ.98ರಷ್ಟು ಮಳೆಯಾಗುವ ಸಾಧ್ಯತೆಯಿದ್ದು,ಈ ಅಂದಾಜಿನಲ್ಲಿ ಶೇ.5ರಷ್ಟು ಹೆಚ್ಚು ಕಡಿಮೆಯಾಗಬಹುದು ಎಂದು ಅದು ಹೇಳಿದೆ.
ದೀರ್ಘಾವಧಿ ಸರಾಸರಿಯು 1961 ಮತ್ತು 2010ರ ನಡುವಿನ ಅವಧಿಯಲ್ಲಿ ದೇಶದಲ್ಲಿ ಬಿದ್ದ ಮಳೆಯ ಸರಾಸರಿಯಾಗಿದ್ದು,ಇದು 88 ಸೆಂ.ಮೀ.ನಷ್ಟಿದೆ. ದೀರ್ಘಾವಧಿ ಸರಾಸರಿಯ ಶೇ.96ರಿಂದ ಶೇ.104ರಷ್ಟು ಮಳೆಯನ್ನು ವಾಡಿಕೆಯ ಪ್ರಮಾಣ ಎಂದು ಪರಿಗಣಿಸಲಾಗುತ್ತದೆ.
ಇದು ದೇಶದಲ್ಲಿ ಸಾಮಾನ್ಯ ಅಥವಾ ಸಾಮಾನ್ಯಕ್ಕಿಂತ ಹೆಚ್ಚು ಮಳೆಯಾಗಲಿರುವ ಸತತ ಮೂರನೇ ವರ್ಷವಾಗಿದೆ. ಖಾಸಗಿ ಹವಾಮಾನ ಸಂಸ್ಥೆ ಸ್ಕೈಮೆಟ್ ಕೂಡ ಈ ವರ್ಷ ಜೂನ್-ಸೆಪ್ಟೆಂಬರ್ ನಡುವೆ ದೀರ್ಘಾವಧಿ ಸರಾಸರಿಯ ಶೇ.103ರಷ್ಟು ಮಳೆಯಾಗಲಿದೆ ಎಂದು ಮಂಗಳವಾರ ತಿಳಿಸಿತ್ತು. ಮೇ ಕೊನೆಯ ವಾರದಲ್ಲಿ ಪರಿಷ್ಕೃತ ಮುಂಗಾರು ಮಳೆ ಅಂದಾಜನ್ನು ಪ್ರಕಟಿಸುವುದಾಗಿ ಹವಾಮಾನ ಇಲಾಖೆಯು ತಿಳಿಸಿದೆ.
ಮುಂಗಾರು ಮಳೆಯ ಬಗ್ಗೆ ಹವಾಮಾನ ಇಲಾಖೆಯ ಭವಿಷ್ಯವನ್ನು ‘ನಿಜಕ್ಕೂ ಒಳ್ಳೆಯ ಸುದ್ದಿ ’ಎಂದು ಬಣ್ಣಿಸಿದ ಭೂವಿಜ್ಞಾನಗಳ ಸಚಿವಾಲಯದ ಕಾರ್ಯದರ್ಶಿ ಎಂ.ರಾಜೀವನ್ ಅವರು,ಅದು ಒಳ್ಳೆಯ ಕೃಷಿ ಇಳುವರಿಯನ್ನು ಸಾಧಿಸಲು ನೆರವಾಗಲಿದೆ ಎಂದು ಹೇಳಿದರು.