ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 101 ಮಂದಿಗೆ ಕೊರೋನ ಪಾಸಿಟಿವ್, ಒಂದು ಬಲಿ

ಉಡುಪಿ, ಎ.16: ಕೊರೋನ ಎರಡನೇ ಅಲೆಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಿತರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಪಾಸಿಟಿವ್ ಕಂಡುಬರುತಿದ್ದು, ಶುಕ್ರವಾರದಂದು ಉಡುಪಿ ಜಿಲ್ಲೆಯಲ್ಲಿ ಕೋವಿಡ್ 193ನೇ ಬಲಿಯನ್ನು ಪಡೆಯಿತು. ದಿನದಲ್ಲಿ 101 ಮಂದಿ ಪಾಸಿಟಿವ್ ಬಂದಿದ್ದು, 35 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಕೋವಿಡ್‌ಗೆ ಸಕ್ರಿಯರಾಗಿರುವವರ ಸಂಖ್ಯೆ ಈಗ 591ಕ್ಕೇರಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಉಸಿರಾಟದ ತೊಂದರೆ ಹಾಗೂ ಕೆಮ್ಮುವಿನಿಂದ ನರಳುತಿದ್ದ ಪರ್ಕಳದ 59 ವರ್ಷ ಪ್ರಾಯದ ಪುರುಷರೊಬ್ಬರು ಕಳೆದ ಎ.12ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿರುವುದಾಗಿ ಇಲಾಖೆಯ ಬುಲೆಟಿನ್ ತಿಳಿಸಿದೆ. ಇವರು ಕೋವಿಡ್‌ನೊಂದಿಗೆ ತೀವ್ರ ಉಸಿರಾಟದ ತೊಂದರೆಯಿಂದ ಬಳಲುತಿದ್ದರು ಎಂದು ಹೇಳಲಾಗಿದೆ.
ಇಂದು ಪಾಸಿಟಿವ್ ಬಂದ 101 ಮಂದಿಯಲ್ಲಿ 59 ಮಂದಿ ಪುರುಷರು ಹಾಗೂ 42 ಮಂದಿ ಮಹಿಳೆಯರು. ಇವರಲ್ಲಿ 63 ಮಂದಿ ಉಡುಪಿ ತಾಲೂಕಿನವರಾದರೆ 23 ಮಂದಿ ಕುಂದಾಪುರ ಹಾಗೂ 14 ಮಂದಿ ಕಾರ್ಕಳ ತಾಲೂಕಿನವರು. ಮತ್ತೊಬ್ಬರು ಹೊರಜಿಲ್ಲೆಯಿಂದ ಚಿಕಿತ್ಸೆಗೆಂದು ಬಂದವರಾಗಿದ್ದಾರೆ. 101ರಲ್ಲಿ 86 ಮಂದಿ ಹೋಮ್ ಐಸೋಲೇಷನ್‌ನಲ್ಲಿದ್ದಾರೆ ಎಂದು ಡಾ.ಸೂಡ ತಿಳಿಸಿದರು.
ಗುರುವಾರ 35 ಮಂದಿ ಸೋಂಕಿನಿಂದ ಗುಣಮುಖರಾಗುವ ಮೂಲಕ ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 25,686ಕ್ಕೇರಿದೆ. ನಿನ್ನೆ ಜಿಲ್ಲೆಯ 2391 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಇಂದಿನ 101 ಮಂದಿ ಸೇರಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 26,470 ಎಂದು ಡಾ.ಸೂಡ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 4,59,554 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ. ಜಿಲ್ಲೆಯಲ್ಲಿ ಈವರೆಗೆ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 193 ಆಗಿದೆ.
ಶುಕ್ರವಾರ 6451 ಮಂದಿಗೆ ಲಸಿಕೆ
ಕೊರೋನ ವಿರುದ್ಧದ ಲಸಿಕೆಯನ್ನು ಜಿಲ್ಲೆಯಲ್ಲಿ ಇಂದು ಒಟ್ಟು 6451 ಮಂದಿ ಸ್ವೀಕರಿಸಿದ್ದಾರೆ. ಇವರಲ್ಲಿ 5048 ಮಂದಿ ಲಸಿಕೆಯ ಮೊದಲ ಡೋಸ್ ಪಡೆದರೆ, 1403 ಮಂದಿಗೆ ಎರಡನೇ ಡೋಸ್ ನೀಡಲಾಯಿತು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಶುಕ್ರವಾರ ಜಿಲ್ಲೆಯಲ್ಲಿ 45 ವರ್ಷ ಮೇಲಿನ ಒಟ್ಟು 6229 ಮಂದಿ ಲಸಿಕೆಯನ್ನು ಸ್ವೀಕರಿಸಿದ್ದು, ಇವರಲ್ಲಿ 5035 ಮಂದಿ ಮೊದಲ ಡೋಸ್‌ನ್ನೂ, 1194 ಮಂದಿ ಎರಡನೇ ಡೋಸ್‌ನ್ನು ಪಡೆದಿದ್ದಾರೆ. 199 ಮಂದಿ ಆರೋಗ್ಯ ಕಾರ್ಯಕರ್ತರು ಹಾಗೂ 23 ಮಂದಿ ಕೊರೋನ ಮುಂಚೂಣಿ ಯೋಧರು ಸಹ ಇಂದು ಲಸಿಕೆ ಸ್ವೀಕರಿಸಿದವರಲ್ಲಿ ಸೇರಿದ್ದಾರೆ ಎಂದವರು ಹೇಳಿದರು.
ಜಿಲ್ಲೆಯಲ್ಲಿ ಇದುವರೆಗೆ 1,57,051 ಮಂದಿ ಲಸಿಕೆಯ ಮೊದಲ ಡೋಸ್‌ನ್ನು ಪಡೆದರೆ, 26,343 ಮಂದಿ ಎರಡನೇ ಡೋಸ್‌ನ್ನು ಸ್ವೀಕರಿಸಿದ್ದಾರೆ ಎಂದು ಡಾ.ಸೂಡ ತಿಳಿಸಿದರು.







