5,300ಕ್ಕೂ ಹೆಚ್ಚು ಬಸ್ಸುಗಳ ಸಂಚಾರ, ನೀತಿ ಸಂಹಿತೆ ಮುಗಿದ ಬಳಿಕ ವೇತನ ಹೆಚ್ಚಳ: ಡಿಸಿಎಂ ಲಕ್ಷ್ಮಣ ಸವದಿ

ಬೆಂಗಳೂರು, ಎ.16: ಸರಕಾರದ ಮನವಿಗೆ ಸ್ಪಂದಿಸಿ ಅನೇಕ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿದ್ದು, 5,300ಕ್ಕೂ ಹೆಚ್ಚು ಬಸ್ಸುಗಳು ಸಂಚರಿಸುವಂತಾಗಿದ್ದು, ಕರ್ತವ್ಯ ನಿರತ ಸಿಬ್ಬಂದಿಗಳಿಗೆ ಸಾರಿಗೆ ಸಚಿವ ಲಕ್ಷ್ಮಣ ಸವದಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾನು ಈಗಾಗಲೇ ತಿಳಿಸಿದಂತೆ ಚುನಾವಣಾ ನೀತಿ ಸಂಹಿತೆ ಅವಧಿ ಮುಗಿದ ನಂತರ ಸಾರಿಗೆ ನೌಕರರ ವೇತನ ಹೆಚ್ಚಳಕ್ಕೆ ನಮ್ಮ ಸರಕಾರ ಬದ್ಧವಾಗಿದೆ. ಆದರೂ ಸಾರಿಗೆ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿರುವುದು ವಿಪರ್ಯಾಸವೆಂದು ವಿಷಾದಿಸಿದ್ದಾರೆ.
ಸಾರಿಗೆ ನಿಗಮಗಳಿಗೆ ಬರಬೇಕಾಗಿದ್ದ ಆದಾಯ ಸ್ಥಗಿತಗೊಂಡು ಈವರೆಗೆ ಸುಮಾರು 187 ಕೋಟಿ ರೂ.ಗಿಂತಲೂ ಹೆಚ್ಚು ಮೊತ್ತದ ಹಾನಿಯಾಗಿದೆ. ಈ ರೀತಿಯ ಬೆಳವಣಿಗೆಗಳಿಂದ ಸಾರಿಗೆ ನಿಗಮಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನಾಲ್ಕೂ ಸಾರಿಗೆ ನಿಗಮಗಳಲ್ಲಿ ಸಾರ್ವಜನಿಕ ಸೇವೆಗೆ ಮುಂದಾಗಿದ್ದ ಬಸ್ಸುಗಳ ಪೈಕಿ ಕೆಲವು ದುಷ್ಕರ್ಮಿಗಳು ನಡೆಸಿದ ಕಲ್ಲುತೂರಾಟ ಮತ್ತು ಹಿಂಸಾಚಾರಗಳಿಂದಾಗಿ ಈವರೆಗೆ ಒಟ್ಟು 80 ಬಸ್ಸುಗಳು ಜಖಂಗೊಂಡಿದ್ದು, ಸಾರಿಗೆ ನಿಗಮಗಳಿಗೆ ಮತ್ತಷ್ಟು ಆರ್ಥಿಕ ಹಾನಿ ಹೆಚ್ಚುವಂತಾಗಿದೆ. ಇದರಿಂದ ಪರೋಕ್ಷವಾಗಿ ನಮ್ಮ ನಿಗಮಗಳ ನೌಕರರಿಗೆ ನಷ್ಟವಾಗುತ್ತದೆ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕೆಂದು ಅವರು ತಿಳಿಸಿದ್ದಾರೆ.
ಶಾಂತಿ ಮತ್ತು ಸಹನೆಯ ಧೋರಣೆಯನ್ನು ನಮ್ಮ ಸರಕಾಶರ ತಳೆದಿದ್ದು, ಇದನ್ನು ಯಾರೂ ದುರುಪಯೋಗಪಡಿಸಿಕೊಳ್ಳಬಾರದು. ಒಂದು ವೇಳೆ ಅಹಿತಕರ ಘಟನೆಯಂಥ ಕೃತ್ಯಗಳಿಗೆ ಮುಂದಾದರೆ ಅವರು ತಕ್ಕ ಶಾಸ್ತಿ ಅನುಭವಿಸಬೇಕಾಗುತ್ತದೆ. ನಮ್ಮ ನೌಕರ ಬಾಂಧವರು ಸ್ವಯಂಪ್ರೇರಿತರಾಗಿ ಕೆಲಸಕ್ಕೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ತಡೆಯುವ, ಹಲ್ಲೆಗೆ ಮುಂದಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದೆಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ನೌಕರರ ಬೇಡಿಕೆ ಬಗ್ಗೆ ಸಿನಿಮಾ ನಟ ಯಶ್ ಸೇರಿದಂತೆ ಕೆಲವರು ನನ್ನೊಂದಿಗೆ ಚರ್ಚಿಸಿದ್ದಾರೆ. ಅವರ ಬೇಡಿಕೆಗಳ ಬಗ್ಗೆ ನನಗೂ ಸಹಾನುಭೂತಿಯಿದೆ. ಆದರೆ, ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವಿಲ್ಲ. ನಮ್ಮ ನೌಕರ ಬಂಧುಗಳು ಕರ್ತವ್ಯಕ್ಕೆ ಹಾಜರಾಗಿ ಮುಷ್ಕರ ಸ್ಥಗಿತಗೊಳಿಸಿದರೆ ಮತ್ತೆ ಮಾತುಕತೆ ಪ್ರಕ್ರಿಯೆ ಮುಂದುವರೆದು ನೌಕರರಿಗೇ ಹೆಚ್ಚಿನ ಅನುಕೂಲವಾಗುತ್ತದೆ. ಆದರೆ ಕೆಲವು ಪಟ್ಟಭದ್ರರ ಚಿತಾವಣೆಯಿಂದ ಇದು ಕೈಗೂಡುತ್ತಿಲ್ಲ.
-ಲಕ್ಷ್ಮಣ ಸವದಿ, ಸಾರಿಗೆ ಸಚಿವ







