60 ಶೇಕಡ ಶುದ್ಧತೆಯ ಯುರೇನಿಯಂ ಉತ್ಪಾದನೆ ಆರಂಭ: ಇರಾನ್ ಘೋಷಣೆ
ಟೆಹರಾನ್ (ಇರಾನ್), ಎ. 16: 60 ಶೇಕಡ ಶುದ್ಧತೆಯ ಯುರೇನಿಯಂ ಉತ್ಪಾದನೆಯನ್ನು ಆರಂಭಿಸಿರುವುದಾಗಿ ಇರಾನ್ ಶುಕ್ರವಾರ ತಿಳಿಸಿದೆ. ಇದು 2015ರ ಪರಮಾಣು ಒಪ್ಪಂದದ ಅಡಿಯಲ್ಲಿ ಅಂತರ್‌ರಾಷ್ಟ್ರೀಯ ಸಮುದಾಯಕ್ಕೆ ಅದು ನೀಡಿರುವ ಬದ್ಧತೆಗಳ ಇನ್ನೊಂದು ಉಲ್ಲಂಘನೆಯಾಗಿದೆ.
ಇರಾನ್‌ನ ನತಾಂಝ್ ಪರಮಾಣು ಸ್ಥಾವರದ ಮೇಲೆ ಇತ್ತೀಚೆಗೆ ನಡೆದ ದಾಳಿಯ ಎರಡು ದಿನಗಳ ಬಳಿಕ, ಅಂದರೆ ಮಂಗಳವಾರ, ತಾನು ಯುರೇನಿಯಂ ಸಂವರ್ಧನೆಯನ್ನು ಗಣನೀಯವಾಗಿ ಏರಿಸುವುದಾಗಿ ಅದು ಹೇಳಿತ್ತು. ತನ್ನ ಬದ್ಧ ಶತ್ರು ಇಸ್ರೇಲ್ ಈ ದಾಳಿಯನ್ನು ನಡೆಸಿದೆ ಎಂಬುದಾಗಿ ಅದು ಆರೋಪಿಸುತ್ತಿದೆ.
ಈ ಬೆಳವಣಿಗೆಯು ಇರಾನ್ ಮತ್ತು ಪ್ರಬಲ ದೇಶಗಳ ನಡುವೆ 2015ರಲ್ಲಿ ನಡೆದ ಒಪ್ಪಂದವನ್ನು ಉಳಿಸುವುದಕ್ಕಾಗಿ ವಿಯೆನ್ನಾದಲ್ಲಿ ನಡೆಯುತ್ತಿರುವ ಮಾತುಕತೆಯ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುವ ಸಾಧ್ಯತೆಗಳಿವೆ.
Next Story