ಶಿವಾಲಯದಲ್ಲಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ವಿರುದ್ಧ ಪ್ರಕರಣ ದಾಖಲಿಸಲು ಬಿಜೆಪಿ ಸಂಸದ ಆಗ್ರಹ

Photo: twitter.com/nishikant_dubey
ರಾಂಚಿ, ಎ.16: ಶಿವಾಲಯದಲ್ಲಿ ಪೂಜೆ ಸಲ್ಲಿಸಿದ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿಯ ವಿರುದ್ಧ ಕ್ರಮ ಕೈಗೊಂಡು ಎನ್ಎಸ್ಎಯಡಿ ಪ್ರಕರಣ ದಾಖಲಿಸದಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಜಾರ್ಖಂಡ್ನ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಹೇಳಿದ್ದಾರೆ.
ಅನ್ಸಾರಿ ನಿಜವಾಗಿಯೂ ಶಿವನ ಭಕ್ತರಾಗಿದ್ದರೆ ಮೊದಲು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳಲಿ. ಆ ಬಳಿಕ ಪೂಜೆ ಸಲ್ಲಿಸಬಹುದು. ಆದರೆ ಹಿಂದೂ ಅಲ್ಲದವರ ಪ್ರವೇಶಕ್ಕೆ ಅವಕಾಶವಿಲ್ಲದ ದೇವಸ್ಥಾನ ಪ್ರವೇಶಿಸಿರುವ ಅನ್ಸಾರಿ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆ(ಎನ್ಎಸ್ಎ)ಯಡಿ ಪ್ರಕರಣ ದಾಖಲಿಸಿ ಬಂಧಿಸಬೇಕು ಎಂದು ದುಬೆ ಆಗ್ರಹಿಸಿದ್ದಾರೆ.
ದಿಯೋಘಡದ ಪ್ರಸಿದ್ಧ ಶಿವಾಲಯ ಬೈದ್ಯನಾಥಧಾಮ ದೇವಸ್ಥಾನದಲ್ಲಿ ಅನ್ಸಾರಿ ಬುಧವಾರ ಪೂಜೆ ಸಲ್ಲಿಸಿರುವುದು ವಿವಾದಕ್ಕೆ ಕಾರಣವಾಗಿದೆ. ತಮ್ಮ ಸಹಚರರೊಂದಿಗೆ ದೇವಸ್ಥಾನದ ಗರ್ಭಗುಡಿ ಪ್ರವೇಶಿಸಿ ಪೂಜೆ ಸಲ್ಲಿಸಿರುವುದನ್ನು ಸಮರ್ಥಿಸಿಕೊಂಡಿರುವ ಅನ್ಸಾರಿ, ಚಿಕ್ಕವನಿದ್ದಾಗಿನಿಂದಲೂ ಬೈದ್ಯನಾಥಧಾಮ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸುತ್ತಿದ್ದೆ. ಚುನಾವಣೆ ಬಂದಾಗ ದೇವಸ್ಥಾನಕ್ಕೆ ತೆರಳುತ್ತಿದ್ದು ಶಿವದೇವರ ಆಶೀರ್ವಾದ ಪಡೆಯುತ್ತೇನೆ. ಶಿವನಿಂದ ನನ್ನನ್ನು ದೂರಗೊಳಿಸಲು ನಿಶಿಕಾಂತ್ ದುಬೆ ಯಾರು? ಎಂದು ಪ್ರಶ್ನಿಸಿದ್ದಾರೆ.







