ವಾಟ್ಸಾಪ್ ನಲ್ಲಿ ಹರಿದಾಡುತ್ತಿರುವ ಪಿಂಕ್ ವಾಟ್ಸಾಪ್ ಎಂಬ ವೈರಲ್ ಲಿಂಕ್ ಕ್ಲಿಕ್ ಮಾಡದಿರಿ

ಹೊಸದಿಲ್ಲಿ: ಸಾಮಾಜಿಕ ಜಾಲ ತಾಣಗಳಲ್ಲಿ ದಿನಬೆಳಗಾದರೆ ಸಾಕು ಹಲವಾರು ನೀಲಿಬಣ್ಣಕ್ಕೆ ತಿರುಗಿರುವ ಲಿಂಕ್ ಗಳು ಕಂಡು ಬರುತ್ತದೆ. ಸರಿಯಾದ ಅಧಿಕೃತವಿರುವ ಲಿಂಕ್ ಗಳನ್ನು ಮಾತ್ರ ಕ್ಲಿಕ್ ಮಾಡುವಲ್ಲಿ ನಾವು ನಮ್ಮ ವಿವೇಚನೆಯನ್ನು ಬಳಸಬೇಕಾಗುತ್ತದೆ. ಕೆಲವೊಂದು ಲಿಂಕ್ ಗಳನ್ನು ಕ್ಲಿಕ್ ಮಾಡಿದ ತಕ್ಷಣ ನಮ್ಮ ಖಾಸಗಿ ಮಾಹಿತಿಗಳು ಬಹಿರಂಗವಾಗಲೂಬಹುದು. ಇದೀಗ ವಾಟ್ಸಾಪ್ ನಾದ್ಯಂತ ಹೊಸದೊಂದು ʼಪಿಂಕ್ ವಾಟ್ಸಾಪ್ʼ ಎಂಬ ಹೆಸರಿನಲ್ಲಿ ಲಿಂಕ್ ಹರಿದಾಡುತ್ತಿದ್ದು. ಹಲವು ಬಳಕೆದಾರರು ಫಜೀತಿಗೊಳಗಾಗಿದ್ದಾರೆ.
ಕ್ಲಿಕ್ ಗಳ ಮೂಲಕ ಇಂಟರ್ನೆಟ್ ನಲ್ಲಿ ಪ್ರಭಾವ ಸೃಷ್ಟಿಸುವ ಸಲುವಾಗಿ ಹ್ಯಾಕರ್ ಗಳು ಇಂತಹಾ ಲಿಂಕ್ ಗಳನ್ನು ತಯಾರಿಸುತ್ತಾರೆ. ಮೂರು ವರ್ಷಗಳ ಹಿಂದೆ ಪಿಂಕ್ ಬದಲಿಗೆ ಗ್ರೀನ್ ಎಂದೂ ಈ ಮೆಸೇಜ್ ಹರಿದಾಡಿತ್ತು. ಇದನ್ನು ಕ್ಲಿಕ್ ಮಾಡಿದ ತಕ್ಷಣವೇ ನಿಮಗರಿವಿಲ್ಲದಂತೆ ನಿಮ್ಮ ಹೆಸರಿನಲ್ಲಿ ನಿಮ್ಮಲ್ಲಿರುವ ಎಲ್ಲಾ ವಾಟ್ಸಾಪ್ ಗ್ರೂಪ್ ಗಳಿಗೆ ಈ ಮೆಸೇಜ್ ಫಾರ್ವರ್ಡ್ ಆಗುತ್ತದೆ. ನೀವು ಕಳಿಸಿದ್ದನ್ನು ನೋಡಿ ಉಳಿದವರೂ ಕ್ಲಿಕ್ ಮಾಡಿದರೆ ಅವರಲ್ಲಿರುವ ಗ್ರೂಪ್ ಗಳಿಗೆ ಈ ಮೆಸೇಜ್ ಮತ್ತು ಲಿಂಕ್ ರವಾನೆಯಾಗುತ್ತದೆ. ವಾಟ್ಸಾಪ್ ಇದುವರೆಗೂ ಬಣ್ಣ ಬದಲಾಯಿಸುವ ಆಯ್ಕೆಗಳನ್ನು ನೀಡಿಲ್ಲ. ಮುಂದೆ ನೀಡಲೂಬಹುದು ಎಂದಷ್ಟೇ ಹೇಳಿಕೊಂಡಿದೆ. ಇದೇ ಹೆಸರಿನಲ್ಲಿ ವಿಮಾನ ಟಿಕೆಟ್ ಗಳು, ಉಚಿತ ಟೀಶರ್ಟ್ ಗಳು, ಉಚಿತ ಪ್ರವಾಸ ಹೀಗೆ ಹಲವಾರು ಲಿಂಕ್ ಗಳು ಬರುತ್ತಿರುತ್ತವೆ.
ಆದ್ದರಿಂದ ವಾಟ್ಸಾಪ್ ಆಗಲಿ ಇನ್ಯಾವ ಜಾಲತಾಣಗಳೇ ಆಗಲಿ, ಅಧಿಕೃತವಾದ ಲಿಂಕ್ ಗಳಾಗಿದ್ದಲ್ಲಿ ಮಾತ್ರ ವಿವೇಚನೆಯಿಂದ ಕ್ಲಿಕ್ ಮಾಡಿ. ಇಲ್ಲವಾದಲ್ಲಿ ವೃಥಾ ತೊಂದರೆಗಳನ್ನು ಮೈಗೆಳೆದುಕೊಂಡಂತಾಗಬಹುದು.