ಕೊಲ್ಲಂ: ಕಾನ್ವೆಂಟ್ ಬಾವಿಯಲ್ಲಿ ಕ್ರೈಸ್ತ ಸನ್ಯಾಸಿನಿಯ ಮೃತದೇಹ ಪತ್ತೆ

ಸಾಂದರ್ಭಿಕ ಚಿತ್ರ
ಕೊಲ್ಲಂ, ಎ. 16: ನಲ್ವತ್ತೆರೆಡು ವರ್ಷದ ಕೆಥೋಲಿಕ್ ಸನ್ಯಾಸಿನಿಯ ಮೃತದೇಹ ಕೊಲ್ಲಂ ಜಿಲ್ಲೆಯ ಕುರೀಪುಳದಲ್ಲಿರುವ ಸಂತ ಜೋಸಫ್ ಕಾನ್ವೆಂಟ್ನ ಬಾವಿಯಲ್ಲಿ ಶುಕ್ರವಾರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಕರುನಗಪಲ್ಲಿ ನಿವಾಸಿಯಾಗಿರುವ ಮೇಬಲ್ ಜೋಸೆಫ್ ಅವರ ಮೃತದೇಹ ಕಾನ್ವೆಂಟ್ನ ಕ್ಯಾಂಪಸ್ಸಿನಲ್ಲಿರುವ ಬಾವಿಯಲ್ಲಿ ತೇಲುತ್ತಿರುವುದನ್ನು ಅವರ ಸಹವಾಸಿಗಳು ಶುಕ್ರವಾರ ಬೆಳಗ್ಗೆ ಗಮನಿಸಿದರು. ಮೇಬಲ್ ಜೋಸೆಫ್ ಅವರು ಎಂದಿನಂತೆ ಮುಂಜಾನೆಯ ಪ್ರಾರ್ಥನೆಗೆ ಹಾಜರಾಗದ ಹಿನ್ನೆಲೆಯಲ್ಲಿ ಅವರು ಹುಡುಕಾಟ ನಡೆಸಿದ್ದರು. ಮೇಲ್ನೋಟಕ್ಕೆ ಇದು ಆತ್ಮಹತ್ಯೆಯಂತೆ ಕಂಡು ಬರುತ್ತಿದೆ. ಮರಣೋತ್ತರ ಪರೀಕ್ಷೆ ಹಾಗೂ ತನಿಖೆಯ ಬಳಿಕ ಇತರ ವಿವರ ತಿಳಿಯಲು ಸಾಧ್ಯ ಎಂದು ಪೊಲೀಸರು ತಿಳಿಸಿದ್ದಾರೆ.
ಮೇಬಲ್ ಜೋಸೆಫ್ ಅವರು ಬರೆದಿದ್ದಾರೆನ್ನಲಾದ ಆತ್ಮಹತ್ಯಾ ಪತ್ರ ಅವರ ಕೊಠಡಿಯಲ್ಲಿ ಪತ್ತೆಯಾಗಿದೆ. ಪತ್ರದಲ್ಲಿ ಅವರು, ‘‘ನನ್ನ ಸಾವಿಗೆ ಯಾರೂ ಕಾರಣರಲ್ಲ. ಆರೋಗ್ಯದ ಸಮಸ್ಯೆಯ ಕಾರಣಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’’ ಎಂದು ಬರೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.





