ಸುಸ್ತಿದಾರರಿಗೆ ಇನ್ನಷ್ಟು ಸಾಲ ಪಡೆಯಲು ಕೇಂದ್ರ ಸರಕಾರ ಅವಕಾಶ

ಸಾಂದರ್ಭಿಕ ಚಿತ್ರ
ಮುಂಬೈ: ಬ್ಯಾಂಕ್ ಸಾಲಗಳ ಸುಸ್ತಿದಾರರು ಮತ್ತಷ್ಟು ಸಾಲ ಪಡೆಯಲು ಕೇಂದ್ರ ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಈ ಸಂಬಂಧ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರೆಂಟಿ ಸ್ಕೀಂನ ವ್ಯಾಪ್ತಿಯನ್ನು ವಿಸ್ತರಿಸಲಾಗಿದ್ದು, 60 ದಿನಗಳ ಸುಸ್ತಿ ಬಾಕಿ ಹೊಂದಿರುವವರಿಗೆ ಈ ಸೌಲಭ್ಯ ಸಿಗಲಿದೆ.
ಐಸಿಐಸಿಐ ಬ್ಯಾಂಕ್ ಮುಖ್ಯಸ್ಥ ಕೆ.ವಿ.ಕಾಮತ್ ನೇತೃತ್ವದ ಸಮಿತಿ ಗುರುತಿಸಿದ 26 ಒತ್ತಡ ವಲಯಗಳಿಗೆ ಈ ಸೌಲಭ್ಯ ದೊರಕಲಿದೆ ಎಂದು ಹಣಕಾಸು ಸೇವೆಗಳ ಇಲಾಖೆ ಸ್ಪಷ್ಟಪಡಿಸಿದೆ. ಆರೋಗ್ಯ ಸೇವೆ, ವಿಮಾನಯಾನ ಮತ್ತು ವಿದ್ಯುತ್, ಸಿಮೆಂಟ್, ನಿರ್ಮಾಣ ಮತ್ತು ಜವಳಿಯಂಥ ಕಾರ್ಪೊರೇಟ್ ಚಿಲ್ಲರೆ ಮಳಿಗೆಗಳು ಈ ವಲಯಗಳಲ್ಲಿ ಸೇರಿವೆ.
ಈ ವಲಯಗಳ ಸಾಲಗಾರರ ಪೈಕಿ 50 ರಿಂದ 500 ಕೋಟಿ ರೂಪಾಯಿ ಸುಸ್ತಿಬಾಕಿ ಹೊಂದಿರುವವರು ಈ ವಿಶೇಷ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಕೋವಿಡ್-19 ಪ್ರಕರಣಗಳ ಹಿನ್ನೆಲೆಯಲ್ಲಿ ಮತ್ತೆ ಲಾಕ್ಡೌನ್ ಎದುರಿಸುತ್ತಿರುವ ನಗರಗಳಿಗೆ ಪರಿಹಾರವಾಗಿ ಮೂರು ಲಕ್ಷ ಕೋಟಿ ರೂಪಾಯಿಯ ಇಸಿಎಲ್ಜಿಎಸ್ಗೆ ತಿದ್ದುಪಡಿಯನ್ನು ಘೋಷಿಸಲಾಗಿದೆ. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಪ್ರಮಾಣದ ಕೈಗಾರಿಕೆಗಳ ದ್ರವ್ಯತೆ ಕೊರತೆ ಸಮಸ್ಯೆ ನೀಗಿಸುವ ಉದ್ದೇಶದಿಂದ ರೂಪಿಸಲಾದ ಈ ಯೋಜನೆಯಡಿ ಶೇಕಡ 80ರಷ್ಟು ಬಳಕೆಯಾಗಿದ್ದು, ಉಳಿಕೆ ಸುಮಾರು 60 ಸಾವಿರ ಕೋಟಿ ರೂಪಾಯಿಗಳ ಸಾಲಸೌಲಭ್ಯ ಸಿಗಲಿದೆ. ಈ ಹಿನ್ನೆಲೆಯಲ್ಲಿ ಕೋವಿಡ್-19ನಿಂದಾಗಿ ತೊಂದರೆಗೀಡಾಗಿರುವ ಆತಿಥ್ಯ, ಪ್ರಯಾಣ ಮತ್ತು ಪ್ರವಾಸೋದ್ಯಮ ವಲಯಗಳಿಗೆ ತೆರೆಯುವ ಮುನ್ನ ವೃತ್ತಿಪರ ವಲಯಗಳಿಗೆ ಈ ನೆರವನ್ನು ಒದಗಿಸಲು ಸರ್ಕಾರ ಮುಂದಾಗಿದೆ.