ಆಕ್ಸಿಜನ್, ಲಸಿಕೆ, ಔಷಧ, ಹಾಸಿಗೆಗಳ ಕೊರತೆಯ ಬಗ್ಗೆ ಪ್ರಧಾನಿ ಮೌನಕ್ಕೆ ಸೋನಿಯಾ ಗಾಂಧಿ ಆಕ್ರೋಶ

ಹೊಸದಿಲ್ಲಿ: ಕೋವಿಡ್ 2ನೇ ಅಲೆಯನ್ನು ಕೇಂದ್ರದ ನರೇಂದ್ರ ಮೋದಿ ಸರಕಾರ ನಿರ್ವಹಿಸುತ್ತಿರುವ ರೀತಿಗೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಕಿಡಿ ಕಾರಿದ್ದಾರೆ. ಇಂದು ಪಕ್ಷದ ಉನ್ನತ ನಾಯಕರ ವರ್ಚುವಲ್ ಸಭೆಯಲ್ಲಿ ಭಾಗವಹಿಸಿದ ಸೋನಿಯಾ ಗಾಂಧಿ ಈ ಎರಡನೇ ಅಲೆಗೆ ಸನ್ನದ್ಧವಾಗಲು ಒಂದು ವರ್ಷವೇ ಇದ್ದರೂ ಪ್ರಯೋಜನವಾಗಿಲ್ಲ ಎಂದರಲ್ಲದೆ ರಾಜ್ಯಗಳು ಆಕ್ಸಿಜನ್, ಲಸಿಕೆ ಹಾಗೂ ಇತರ ಅಗತ್ಯತೆಗಳಿಗಾಗಿ ಸತತ ಅಪೀಲು ಸಲ್ಲಿಸಿದ್ದರೂ ಪ್ರಧಾನಿಯ `ಮೌನ'ದ ವಿರುದ್ಧವೂ ಅವರು ವಾಗ್ದಾಳಿ ನಡೆಸಿದರು. ಲಸಿಕೆಗೆ ಅರ್ಹ ವಯಸ್ಸನ್ನು 25ಕ್ಕೆ ಇಳಿಸಬೇಕೆಂದು ಈ ಸಂದರ್ಭ ಸೋನಿಯಾ ಆಗ್ರಹಿಸಿದ್ದಾರೆ.
ಸಾಂಕ್ರಾಮಿಕವೊಂದರ ವಿರುದ್ಧದ ಹೋರಾಟ ರಾಷ್ಟ್ರೀಯ ಸವಾಲು ಎಂದಿರುವ ಸೋನಿಯಾ ಈ ಹೋರಾಟವನ್ನು ರಾಜಕೀಯರಹಿತವಾಗಿರಿಸಬೇಕು ಎಂದು ಸಭೆಯ ನಂತರ ಬಿಡುಗಡೆಗೊಳಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ಕಾಂಗ್ರೆಸ್ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಸಭೆ ನಡೆಸಿದ ನಂತರ ಪ್ರಧಾನಿಗೆ ಪತ್ರ ಬರೆದಿದ್ದೇನೆ. ನಮ್ಮ ಮುಖ್ಯಮಂತ್ರಿಗಳು ಲಸಿಕೆ, ಆಕ್ಸಿಜನ್, ವೆಂಟಿಲೇಟರ್‍ಗಳಿಗೆ ಬೇಡಿಕೆಯಿಟ್ಟಿದ್ದರು ಆದರೆ ಸರಕಾರ ದಿವ್ಯ ಮೌನ ವಹಿಸಿದೆ. ಆದರೆ ಕೆಲ ಇತರ ರಾಜ್ಯಗಳಿಗೆ ಆದ್ಯತೆಯ ಮೇಲೆ ಪರಿಹಾರ ದೊರಕಿದೆ" ಎಂದು ಅವರು ಬರೆದಿದ್ದಾರೆ.
"ನಮ್ಮ ದೇಶದಲ್ಲಿ ಗರಿಷ್ಠ ಸೋಂಕಿನ ಪ್ರಮಾಣವಿದ್ದರೂ ಕೇಂದ್ರ ಸರಕಾರ 6.5 ಕೋಟಿ ಕೋವಿಡ್ ಲಸಿಕೆ ಡೋಸ್‍ಗಳನ್ನು ಇತರ ದೇಶಗಳಿಗೆ ರಫ್ತುಗೊಳಿಸಿದೆ. ರಫ್ತನ್ನು ನಿಲ್ಲಿಸಿ ನಮ್ಮ ದೇಶಗಳ ನಾಗರಿಕರ ರಕ್ಷಣೆಗೆ ಆದ್ಯತೆ ನೀಡಬೇಕಲ್ಲವೇ?" ಎಂದೂ ಸೋನಿಯಾ ಪ್ರಶ್ನಿಸಿದ್ದಾರೆ.