ಸೋನು ಸೂದ್ ಗೆ ಕೊರೋನ ಪಾಸಿಟಿವ್

ಹೊಸದಿಲ್ಲಿ: ನಟ ಸೋನು ಸೂದ್ ಗೆ ಕೊರೋನ ಪಾಸಿಟಿವ್ ದೃಢಪಟ್ಟಿದೆ. ಅವರು ಶನಿವಾರ ಇನ್ ಸ್ಟಾಗ್ರಾಮ್ ಪೋಸ್ಟ್ ಮೂಲಕ ತನ್ನ ಅಭಿಮಾನಿಗಳಿಗೆ ಈ ವಿಚಾರವನ್ನು ತಿಳಿಸಿದ್ದಾರೆ.
ಈ ತಿಂಗಳಾರಂಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಸೋನು ಅವರನ್ನು ಪಂಜಾಬ್ ಕೋವಿಡ್ ಲಸಿಕೆ ನೀಡಿಕೆ ಅಭಿಯಾನದ ಸದ್ಬಾವನಾ ರಾಯಭಾರಿಯನ್ನಾಗಿ ನೇಮಿಸಿದ್ದರು.
ತನಗೆ ಕೊರೋನ ವೈರಸ್ ಸೋಂಕು ಬಾಧಿಸಿದ್ದರೂ ತನ್ನ ಮನಸ್ಸು ಹಾಗೂ ಸ್ಪೂರ್ತಿ ಪಾಸಿಟಿವ್ ಆಗಿದೆ ಎಂದಿದ್ದಾರೆ.
ನನಗೆ ಕೋವಿಡ್-19 ಸೋಂಕು ತಗಲಿರುವುದು ಇಂದು ಬೆಳಗ್ಗೆ ದೃಢಪಟ್ಟಿದೆ. ಮುನ್ನಚ್ಚರಿಕಾ ಕ್ರಮವಾಗಿ ನಾನು ಈಗಾಗಲೆ ಸ್ವಯಂ ಕ್ವಾರಂಟೈನ್ ನಲ್ಲಿದ್ದೇನೆ. ಹೆಚ್ಚು ಕಾಳಜಿ ವಹಿಸಿದ್ದೇನೆ.ಆದರೆ ಚಿಂತಿಸಬೇಡಿ. ನಿಮ್ಮ ಸಮಸ್ಯೆಗಳನ್ನು ಬಗೆಹರಿಸಲು ಇದು ನನಗೆ ಸ್ವಲ್ಪ ಸಮಯ ನೀಡಿದೆ. ನೆನಪಿಡಿ ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ಅಭಿಮಾನಿಗಳನ್ನುಉದ್ದೇಶಿಸಿ ಸೋನು ಟ್ವೀಟಿಸಿದ್ದಾರೆ.
ಕಳೆದ ವರ್ಷ ಕೊರೋನ ಸಮಯದಲ್ಲಿ ವಲಸೆ ಕಾರ್ಮಿಕರಿಗೆ ನೆರವಾಗುವ ಮೂಲಕ ಸೋನು ಸೂದ್ ಅವರು ಸೋಶಿಯಲ್ ಮೀಡಿಯಾದಲ್ಲಿ ಭಾರೀ ಪ್ರಶಂಸೆಗೆ ಪಾತ್ರರಾಗಿದ್ದರು. ಸೋನು ಅವರು ಸಾವಿರಾರು ವಲಸೆ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಮಾಡಿದ್ದರು. ಕಳೆದ ವರ್ಷ ಕೊರೋನ ಸಮಯದಲ್ಲಿ ಅಲ್ಲಲ್ಲಿ ಸಿಲುಕಿಹಾಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಅವರ ಗ್ರಾಮಕ್ಕೆ ತಲುಪಿಸಿದ್ದರು. ಕೋವಿಡ್‍ನಿಂದಾಗಿ ಆರ್ಥಿಕವಾಗಿ ಹಾನಿಗೊಳಗಾದವರಿಗೆ ಕೂಡ ಸಹಾಯ ಮಾಡಿದ್ದರು.