ಮಮತಾ ದೂರವಾಣಿ ಕರೆ ಕದ್ದಾಲಿಸಿ ಪತ್ರಿಕಾಗೋಷ್ಠಿಯಲ್ಲಿ ಪ್ರಸಾರ: ಚುನಾವಣಾ ಆಯೋಗಕ್ಕೆ ಟಿಎಂಸಿ ದೂರು

ಕೊಲ್ಕತ್ತಾ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೀತಾಕುಲ್ಚಿ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿ ಪಾರ್ಥ ಪ್ರತಿಮ್ ರೇ ಅವರೊಂದಿಗೆ ನಡೆಸಿದ್ದಾರೆನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೋ ಟೇಪ್ ರೆಕಾರ್ಡಿಂಗ್ ಕುರಿತಂತೆ ತೃಣಮೂಲ ಕಾಂಗ್ರೆಸ್ ರಾಜ್ಯದ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿದೆ.
ಸೀತಾಲ್ಕುಚಿ ಸಿಐಎಸ್‍ಎಫ್ ಗೋಲಿಬಾರಿನಲ್ಲಿ ಸಾವಿಗೀಡಾದವರ ಹೆಣಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸಬೇಕೆಂದು ಮಮತಾ ಅವರು ಪ್ರತಿಮ್ ರೇಗೆ ಹೇಳಿದ್ದಾರೆಂದು ಆಡಿಯೋ ಟೇಪ್ ಮುಂದಿಟ್ಟು ಬಿಜೆಪಿ ಆರೋಪಿಸಿದೆ.
ಚುನಾವಣೆಗೆ ಒಂದು ದಿನ ಮುಂಚಿತವಾಗಿ ಬಿಜೆಪಿ ಈ ಆಡಿಯೋ ಟೇಪ್ ಬಿಡುಗಡೆಗೊಳಿಸಿದ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂಬುದು ಟಿಎಂಸಿ ಆರೋಪವಾಗಿದೆ.
ಬಿಜೆಪಿಯು ಸಿಎಂ ಮಮತಾ ಬ್ಯಾನರ್ಜಿಯವರ ದೂರವಾಣಿ ಸಂಭಾಷಣೆಯನ್ನು ಅಕ್ರಮವಾಗಿ ರೆಕಾರ್ಡ್ ಮಾಡಿದೆ ಹಾಗೂ ಅದನ್ನು ಅನಗತ್ಯವಾಗಿ ಪತ್ರಿಕಾಗೋಷ್ಠಿಯಲ್ಲಿ ಎಲ್ಲರಿಗೂ ಕೇಳಿಸಿದೆ. ಇದು ಮುಖ್ಯಮಂತ್ರಿ ಹಾಗೂ ಪ್ರತಿಮ್ ರೇ ಅವರ ಖಾಸಗಿತನದ ಹಕ್ಕಿನ ಉಲ್ಲಂಘನೆಯಾಗಿದೆ ಎಂದು ಪತ್ರದಲ್ಲಿ ಹೇಳಿರುವ ಟಿಎಂಸಿ ಚುನಾವಣಾ ಆಯೋಗದಿಂದ ಸೂಕ್ತ ಕ್ರಮಕ್ಕೆ ಆಗ್ರಹಿಸಿದೆ.