ನನ್ನ ಫೋನ್ ಕರೆ ಯಾರು ಕದ್ದಾಲಿಸಿದ್ದಾರೆಂದು ಗೊತ್ತಿದೆ: ಮಮತಾ ಬ್ಯಾನರ್ಜಿ

ಗಾಲ್ಸಿ(ಪಶ್ಚಿಮ ಬಂಗಾಳ): ನನ್ನ ಫೋನ್ ಕರೆ ಕದ್ದಾಲಿಸಲಾಗಿದ್ದು, ಇದರ ಹಿಂದೆ ಯಾರಿದ್ದಾರೆಂದು ಗೊತ್ತಿದೆ. ಈ ಕುರಿತು ಸಿಐಡಿ ತನಿಖೆಗೆ ಆದೇಶಿಸುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇತ್ತೀಚೆಗೆ ಕೂಚ್ ಬಿಹಾರದಲ್ಲಿ ನಡೆದ ಚುನಾವಣೆಯ ವೇಳೆ ಕೇಂದ್ರ ರಕ್ಷಣಾ ಪಡೆಗಳ ಗುಂಡಿನ ದಾಳಿಗೆ ಬಲಿಯಾದ ನಾಲ್ವರ ಶವದೊಂದಿಗೆ ಮೆರವಣಿಗೆ ನಡೆಸುವಂತೆ ಟಿಎಂಸಿ ಅಭ್ಯರ್ಥಿಗೆ ಮಮತಾ ಅವರು ಸೂಚಿಸುತ್ತಿರುವ ಆಡಿಯೊವನ್ನು ಬಿಜೆಪಿ ಬಿಡುಗಡೆ ಮಾಡಿದ ಮರುದಿನ ಮಮತಾ ಈ ಹೇಳಿಕೆ ನೀಡಿದ್ದಾರೆ.
ಬಂಗಾಳದ ಗಾಲ್ಸಿಯಲ್ಲಿ ಚುನಾವಣಾ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಅವರು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್ಸಿನ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಿಜೆಪಿ ಪಕ್ಷವು ಹೊಂದಿಕೆಯಾಗುವುದಿಲ್ಲವಾದ್ದರಿಂದ ಇಂತಹ ಪಿತೂರಿಯಲ್ಲಿ ಅದು ಭಾಗಿಯಾಗಿದೆ ಎಂದು ಆರೋಪಿಸಿದರು.
"ಅವರು (ಬಿಜೆಪಿ ನಾಯಕರು) ನಮ್ಮ ದೈನಂದಿನ ಸಂಭಾಷಣೆಯನ್ನು ಸಹ ಕೇಳುತ್ತಿದ್ದಾರೆ. ಅವರು ಅಡುಗೆ ಹಾಗೂ ಇತರ ಮನೆಕೆಲಸಗಳ ಕುರಿತ ನಮ್ಮ ಫೋನ್ ಕರೆಗಳನ್ನು ಟ್ಯಾಪ್ ಮಾಡುತ್ತಿದ್ದಾರೆಂದು ತೋರುತ್ತದೆ. ಈ ವಿಷಯದ ಬಗ್ಗೆ ಸಿಐಡಿ ತನಿಖೆಗೆ ನಾನು ಆದೇಶ ನೀಡುತ್ತೇನೆ. ಅಂತಹ ಬೇಹುಗಾರಿಕೆ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಯಾರನ್ನೂ ನಾನು ಬಿಡುವುದಿಲ್ಲ. ಇದರ ಹಿಂದೆ ಯಾರಿದ್ದಾರೆಂದು ನಾನು ಈಗಾಗಲೇ ತಿಳಿದುಕೊಂಡಿದ್ದೇನೆ" ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೆಲವು ಏಜೆಂಟರೊಂದಿಗೆ ಕೇಂದ್ರ ಪಡೆಗಳು ಇಂತಹ ಕೃತ್ಯಗಳಲ್ಲಿ ಭಾಗಿಯಾಗುತ್ತಿವೆ ಎಂಬ ಬಗ್ಗೆ ಮಾಹಿತಿಯಿದೆ. ಇದರ ಹಿಂದೆ ತನ್ನ ಯಾವುದೇ ಪಾತ್ರವಿಲ್ಲ ಎಂದು ಬಿಜೆಪಿ ಹೇಳಿಕೊಂಡರೂ ಅದರ ಹಿಂದೆ ಆ ಪಕ್ಷವೇ ಇದೆ ಎಂಬುದು ಸ್ಪಷ್ಟವಾಗಿದೆ ಎಂದು ಅವರು ಹೇಳಿದರು.