ಪ.ಬಂಗಾಳದಲ್ಲಿ ಐದನೇ ಹಂತದ ಮತದಾನ: ಮತಗಟ್ಟೆ ಬಳಿ ಬಿಜೆಪಿ-ಟಿಎಂಸಿ ನಡುವೆ ಘರ್ಷಣೆ
ಕೋಲ್ಕತಾ,ಎ.17: ರಾಜ್ಯ ವಿಧಾನಸಭಾ ಚುನಾವಣೆಯ ಐದನೇ ಹಂತದ ಮತದಾನ ಶನಿವಾರ ಪೂರ್ಣಗೊಂಡಿದ್ದು, ಬಿಧಾನ ನಗರ ಕ್ಷೇತ್ರದ ಮತಗಟ್ಟೆಯೊಂದರ ಬಳಿ ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿರುವುದು ವರದಿಯಾಗಿದೆ.
ಸುಕಾಂತ ನಗರ ಪ್ರದೇಶದಲ್ಲಿ ಈ ಘರ್ಷಣೆಗಳು ನಡೆದಿದ್ದು,ಚುನಾವಣಾ ಆಯೋಗದ ಆದೇಶದಂತೆ ಅಲ್ಲಿ ಭಾರೀ ಸಂಖ್ಯೆಯಲ್ಲಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.
ಮತದಾರರಿಗೆ ಬೆದರಿಕೆಯೊಡ್ಡಿದ್ದು ಘರ್ಷಣೆಗೆ ಕಾರಣವಾಗಿತ್ತೆನ್ನಲಾಗಿದ್ದು, ಉಭಯ ಪಕ್ಷಗಳು ಪರಸ್ಪರರ ವಿರುದ್ಧ ದೂರಿವೆ. ಘರ್ಷಣೆಯಲ್ಲಿ ಇಟ್ಟಿಗೆಗಳು ಮತ್ತು ಕಲ್ಲುಗಳ ಧಾರಾಳ ಬಳಕೆಯಾಗಿದ್ದು, ಎಂಟು ಜನರು ಗಾಯಗೊಂಡಿದ್ದಾರೆ.
ತನ್ನ ಬಿಜೆಪಿ ಪ್ರತಿಸ್ಪರ್ಧಿ ಸವ್ಯಸಾಚಿ ದತ್ತಾ ಘರ್ಷಣೆಗೆ ಕಾರಣರಾಗಿದ್ದರು ಎಂದು ಟಿಎಂಸಿ ಅಭ್ಯರ್ಥಿ ಹಾಗೂ ಹಾಲಿ ಅಗ್ನಿಶಾಮಕ ಸೇವೆಗಳ ಸಚಿವ ಸುಜಿತ್ ಬೋಸ್ ಆರೋಪಿಸಿದ್ದಾರೆ. ಮಾಜಿ ಟಿಎಂಸಿ ನಾಯಕ ದತ್ತಾ 2019ರಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ತನ್ಮಧ್ಯೆ ಉತ್ತರ 24 ಪರಗಣಗಳ ಜಿಲ್ಲೆಯ ಕಮರಾಟಿಯ ಮತಗಟ್ಟೆಯೊಂದರೊಳಗೆ ಬಿಜೆಪಿ ಏಜೆಂಟ್ ಅಭಿಜಿತ್ ಸಾಮಂತ್ ಎನ್ನುವವರು ಮೃತಪಟ್ಟಿದ್ದಾರೆ. ಯಾರೂ ಆತನಿಗೆ ನೆರವಾಗಿರಲಿಲ್ಲ, ಅಲ್ಲಿ ಚಿಕಿತ್ಸಾ ಸೌಲಭ್ಯವೂ ಇರಲಿಲ್ಲ ಎಂದು ಮೃತನ ಸೋದರ ಸುದ್ದಿಸಂಸ್ಥೆಗೆ ತಿಳಿಸಿದ. ಘಟನೆಯ ಬಗ್ಗೆ ವರದಿಯನ್ನು ಸಲ್ಲಿಸುವಂತೆ ಚುನಾವಣಾ ಆಯೋಗವು ಜಿಲ್ಲಾಡಳಿತಕ್ಕೆ ಸೂಚಿಸಿದೆ.