ರೈಲು, ರೈಲು ನಿಲ್ದಾಣಗಳಲ್ಲಿ ಮಾಸ್ಕ್ ಧರಿಸದವರಿಗೆ ರೂ. 500 ದಂಡ

ಹೊಸದಿಲ್ಲಿ, ಎ. 17: ರೈಲು ಹಾಗೂ ರೈಲು ನಿಲ್ದಾಣದ ಆವರಣದಲ್ಲಿ ಮಾಸ್ಕ್ ಧರಿಸದೇ ಇರುವವರಿಗೆ 500 ರೂಪಾಯಿ ದಂಡ ವಿಧಿಸಲಾಗುವುದು ಎಂದು ಭಾರತೀಯ ರೈಲ್ವೆ ಇಲಾಖೆ ಶನಿವಾರ ಘೋಷಿಸಿದೆ.
ಕೊರೋನ ಸೋಂಕು ಹರಡುವುದನ್ನು ನಿರ್ಬಂಧಿಸುವುದಕ್ಕಾಗಿ ಕೇಂದ್ರ ಆರೋಗ್ಯ ಹಾಗೂ ಕುಟಂಬ ವ್ಯವಹಾರಗಳ ಸಚಿವಾಲಯ ಹೊರಡಿಸಿರುವ ಕೊರೋನ ನಿಯಂತ್ರಣ ಶಿಷ್ಟಾಚಾರದ ಪ್ರಕಾರ ರೈಲ್ವೆ ಇಲಾಖೆ ಈ ಕ್ರಮಗಳನ್ನು ತೆಗೆದುಕೊಂಡಿದೆ.
ಕೊರೋನ ನಿಯಂತ್ರಣಕ್ಕಾಗಿ ಜಾರಿಗೆ ತಂದಿರುವ ಮಾರ್ಗಸೂಚಿಯಲ್ಲಿ ಮಾಸ್ಕ್ ಧರಿಸುವುದು ಕೂಡ ಒಂದು. ರೈಲಿನಲ್ಲಿ ಪ್ರಯಾಣಿಸುವವರು ಹಾಗೂ ರೈಲ್ವೆ ನಿಲ್ದಾಣ ಪ್ರವೇಶಿಸುವವರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂದು ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿ ಭಾರತೀಯ ರೈಲ್ವೆ ಇಲಾಖೆ 2020 ಮೇ 11 ಜಾರಿಗೆ ತಂದಿರುವ ನಿಗದಿತ ಕಾರ್ಯ ವಿಧಾನ (ಎಸ್ಒಪಿ)ದಲ್ಲಿ ಉಲ್ಲೇಖಿಸಲಾಗಿದೆ ಎಂದು ರೈಲ್ವೆಯ ಹೊಸ ಆದೇಶ ತಿಳಿಸಿದೆ.
ಮಾಸ್ಕ್ ಧರಿಸುವುದು ಕಡ್ಡಾಯಗೊಳಿಸಲಾಗಿದ್ದು, ಮಾಸ್ಕ್ ಧರಿಸದೇ ಇರುವವರಿಗೆ ಭಾರತೀಯ ರೈಲ್ವೆಯ (ರೈಲ್ವೆ ಆವರಣದ ಶುಚಿತ್ವಕ್ಕೆ ಧಕ್ಕೆ ತರುವ ಚಟುವಟಿಕೆಗಳಿಗೆ ವಿಧಿಸುವ ದಂಡ) ಕಾಯ್ದೆ 2012ರ ಅಡಿಯಲ್ಲಿ ದಂಡ ವಿಧಿಸಲಾಗುವುದು. ಈ ಕಾಯ್ದೆ ಅಡಿಯಲ್ಲಿ ರೈಲು ಹಾಗೂ ರೈಲು ನಿಲ್ದಾಣಗಳಲ್ಲಿ ಉಳುಗುವವರ ಮೇಲೂ ದಂಡ ವಿಧಿಸಲಾಗುವುದು ಎಂದು ಆದೇಶ ಹೇಳಿದೆ.