ಅಂತರ್ ರಾಷ್ಟ್ರೀಯ ಹಾಕಿ ಅಂಪೈರ್ ಮುಂದಂಡ ಅನುಪಮಾ ಕೊರೋನದಿಂದಾಗಿ ನಿಧನ

ಬೆಂಗಳೂರು, ಎ. 18: ಕೊಡಗು ಮೂಲದ ಮಾಜಿ ಅಂತಾರಾಷ್ಟ್ರೀಯ ಹಾಕಿ ಆಟಗಾರ್ತಿ ಹಾಗೂ ಅಂಪೈರ್ ಆಗಿದ್ದ ಅನುಪಮಾ ಮುಂದಂಡ ಅವರು (41) ಕೊರೋನ ಸೋಂಕಿನಿಂದಾಗಿ ನಿಧನರಾಗಿದ್ದಾರೆ.
ಒಂದು ವಾರದ ಹಿಂದೆ ಅನುಪಮಾ ಅವರಿಗೆ ಕೊರೋನ ಸೋಂಕು ದೃಢಪಟ್ಟಿತ್ತು. ಹೀಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ರವಿವಾರ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ ಎಂದು ಕುಟುಂಬದ ಮೂಲಗಳು ಖಚಿತಪಡಿಸಿವೆ.
ಕೊಡಗು ಜಿಲ್ಲೆಯ ನಾಪೋಕ್ಲುವಿನ ಬೆಥು ಗ್ರಾಮದ ನಿವಾಸಿಯಾಗಿರುವ ಅನುಪಮಾ ಅವರು, 1980ರ ಜುಲೈ 8ರಂದು ಜನಿಸಿದ್ದರು. ಜಿಲ್ಲೆಯ ವಿರಾಜಪೇಟೆ, ಕೊಡಗು, ಮಡಿಕೇರಿ, ಮಂಗಳೂರು ವಿವಿಯಲ್ಲಿ ಪದವಿ ಮತ್ತು ಬೆಂಗಳೂರಿನ ಶೇಷಾದ್ರಿಪುರ ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಹಾಕಿಯತ್ತ ಹೆಚ್ಚು ಒಲವು ಹೊಂದಿದ್ದ ಅವರು, ಕೊಡವ ಕುಟುಂಬಗಳ ನಡುವಿನ ಹಾಕಿ ಸಂದರ್ಭದಲ್ಲಿ ಪುರುಷರ ಜೊತೆಗೆ ಹಾಕಿಯನ್ನು ಆಡಿದ್ದರು.
ಅನುಪಮಾ ಕೊಡಗಿನ ಏಕೈಕ ಅಂತರ್ ರಾಷ್ಟ್ರೀಯ ಮಹಿಳಾ ಅಂಪೈರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಅನುಪಮಾ ಅವರು ಅನೇಕ ಅಂತರ್ ರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಹಾಗೂ ಭಾರತ ಮಹಿಳಾ ಹಾಕಿ ತಂಡದ ಪರವಾಗಿ ಆಟವಾಡಿದ್ದರು. ಮಹಿಳಾ ತೀರ್ಪುಗಾರರಾಗಿ ಖ್ಯಾತಿ ಪಡೆದಿದ್ದರು. ಮೊದಲಿಗೆ ರಾಷ್ಟ್ರೀಯ ಹಾಕಿ ಸಂಸ್ಥೆಯ ತೀರ್ಪುಗಾರರಾಗಿದ್ದ ಅನುಪಮಾ ಬಳಿಕ ಅಂತರ್ ರಾಷ್ಟ್ರೀಯ ಅಂಪೈರ್ ಆಗಿ ಮಾನ್ಯತೆಯನ್ನು ಪಡೆದುಕೊಂಡರು. 2004ರಲ್ಲಿ ಜಪಾನ್‍ನಲ್ಲಿ ನಡೆದ ಚತುಷ್ಕೋನ ಸರಣಿಯಲ್ಲಿ ಮೊದಲ ಬಾರಿಗೆ ಅಂತರ್ ರಾಷ್ಟ್ರೀಯ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸಿದ್ದು, ಇವರ ಹಿರಿಮೆಯಾಗಿದೆ.
35ಕ್ಕೂ ಅಧಿಕ ದೇಶಗಳಲ್ಲಿ 85ಕ್ಕೂ ಅಧಿಕ ಪಂದ್ಯಗಳಲ್ಲಿ ಅಂಪೈರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಜೂನಿಯರ್ ವಿಶ್ವಕಪ್ ಹಾಗೂ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಕಾರ್ಯನಿರ್ವಹಿಸಿರುವ ಭಾರತದ ಮೊದಲ ಮಹಿಳಾ ಹಾಕಿ ರೆಫರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅನುಪಮಾ, 2007ರಲ್ಲಿ ಸರ್ದಾರ್ ಗ್ಯಾನ್ ಸಿಂಗ್ ಸ್ಮಾರಕ ಹಾಕಿ ಸೊಸೈಟಿಯಿಂದ ಶ್ರೇಷ್ಠ ಅಂಪೈರ್(ಮಹಿಳೆ) ಪ್ರಶಸ್ತಿಗೆ ಭಾಜನರಾಗಿದ್ದರು.
ಫೆಡರೇಶನ್ ಇಂಟರ್ ನ್ಯಾಶನಲ್ ಹಾಕಿ ವಿಶ್ವದ ಶ್ರೇಷ್ಠ 10 ಪುರುಷ ಹಾಗೂ ಮಹಿಳಾ ಯುವ ಅಂಪೈರ್ ಗಳ ಪೈಕಿ ಅನುಪಮಾರನ್ನು ಓರ್ವ ಶ್ರೇಷ್ಠ ಅಂಪೈರ್ ಆಗಿ ಆಯ್ಕೆ ಮಾಡಿತ್ತು. ಅನುಪಮಾ ಅವರ ನಿಧನದಿಂದ ಉತ್ತಮ ಹಾಕಿ ಪಟುವೊಬ್ಬರನ್ನು ನಾಡು ಕಳೆದುಕೊಂಡಂತೆ ಆಗಿದೆ. ಅನುಪಮಾ ಅವರ ನಿಧನಕ್ಕೆ ಕ್ರೀಡೆ ಮತ್ತು ರಾಜಕೀಯ ಕ್ಷೇತ್ರದ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.