ಕಾರ್ಗಿಲ್ ಯುದ್ಧಕ್ಕಿಂತ ಕೊರೋನ ಸೋಂಕಿನಿಂದ ಹೆಚ್ಚು ಜನರು ಸಾವು: ಮಾಜಿ ಸೇನಾ ವರಿಷ್ಠ

ಹೊಸದಿಲ್ಲಿ, ಎ. 18: ಭಾರತದಲ್ಲಿ ಕೊರೋನ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವ ಹೊರತಾಗಿಯೂ ಚುನಾವಣಾ ರ್ಯಾಲಿ, ರೈತರ ಚಳವಳಿಗಳು ಹಾಗೂ ಇತರ ಕಾರ್ಯಕ್ರಮಗಳು ನಡೆಯುತ್ತಿರುವ ಬಗ್ಗೆ ಸೇನೆಯ ಮಾಜಿ ವರಿಷ್ಠ ಜನರಲ್ ವೇದ ಪ್ರಕಾಶ್ ಮಲಿಕ್ ರವಿವಾರ ಕಳವಳ ವ್ಯಕ್ತಪಡಿಸಿದ್ದಾರೆ.
ಎರಡು ತಿಂಗಳ ಕಾಲ ನಡೆದ ಕಾರ್ಗಿಲ್ ಯುದ್ಧದಲ್ಲಿ ಸಂಭವಿಸಿದ ಸಾವಿಗಿಂತ ಕೊರೋನ ಸೋಂಕಿನಿಂದ ಪ್ರತಿ ದಿನ ಸಾಯುತ್ತಿರುವವರ ಸಂಖ್ಯೆ ಹೆಚ್ಚಾಗಿದೆ ಎಂದು ವೇದ ಪ್ರಕಾಶ್ ಮಲ್ಲಿಕ್ ಟ್ವೀಟ್ ಮಾಡಿದ್ದಾರೆ.
‘‘ನಮ್ಮ ದೇಶ ಯುದ್ಧದ ಪರಿಸ್ಥಿತಿಯಲ್ಲಿ ಇದೆ. ಕೊರೋನ ಸೋಂಕಿನಿಂದ ನಿನ್ನೆ 1338 ಜನರು ಸಾವನ್ನಪಿದ್ದಾರೆ. ಇದು ಕಾರ್ಗಿಲ್ ಯುದ್ಧದಿಂದ ಒಟ್ಟು ಸಾವನ್ನಪ್ಪಿರುವ ಸಂಖ್ಯೆಗಿಂತ 2.5 ಪಟ್ಟು ಹೆಚ್ಚು. ರಾಷ್ಟ್ರ ಈ ಯುದ್ಧದ ಮೇಲೆ ಗಮನ ಕೇಂದ್ರೀಕರಿಸಿದೆಯೇ?’’ ಎಂದು ಅವರು ಪ್ರಶ್ನಿಸಿದ್ದಾರೆ.
ಕಾರ್ಗಿಲ್ ಯುದ್ಧ ನಡೆದ ಸಂದರ್ಭ ಜನರಲ್ ವೇದ ಮಲ್ಲಿಕ್ ಅವರು ಭಾರತೀಯ ಸೇನೆಯ ವರಿಷ್ಠರಾಗಿದ್ದರು.
Next Story