9 ಮೀನುಗಾರರ ಶೋಧ ಕಾರ್ಯಾಚರಣೆಗೆ ಐಎನ್ಎಸ್ ನಿರೀಕ್ಷಕ್ ನಿಯೋಜನೆ

ಸಾಂದರ್ಭಿಕ ಚಿತ್ರ
ಹೊಸದಿಲ್ಲಿ, ಎ.18: ಮಂಗಳೂರಿನ ಬಳಿ ಸಮುದ್ರದಲ್ಲಿ ದೋಣಿ ಮುಳುಗಿದ ಪ್ರಕರಣದಲ್ಲಿ ನಾಪತ್ತೆಯಾಗಿರುವ 9 ಮೀನುಗಾರರ ಪತ್ತೆ ಮತ್ತು ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ನೌಕಾಪಡೆಯ ಐಎನ್ಎಸ್ ನಿರೀಕ್ಷಕ್ ಹಡಗನ್ನು ನಿಯೋಜಿಸಲಾಗಿದೆ ಎಂದು ನೌಕಾಸೇನೆಯ ಹೇಳಿಕೆ ತಿಳಿಸಿದೆ.
ನವಮಂಗಳೂರು ಬಂದರು ಬಳಿ ಸಮುದ್ರದಲ್ಲಿ ನಾಪತ್ತೆಯಾಗಿರುವ ಮೀನುಗಾರರ ಪತ್ತೆ ಮತ್ತು ರಕ್ಷಣಾ ಕಾರ್ಯಕ್ಕೆ ಪೂರಕವಾಗಿ ನೀರಿನಡಿ ಕಾರ್ಯಾಚರಣೆ ನಡೆಸುವ ಸಾಮರ್ಥ್ಯವುಳ್ಳ, ತಜ್ಞ ಮುಳುಗುಗಾರರನ್ನು ಮತ್ತು ವಿಶೇಷ ಉಪಕರಣಗಳನ್ನು ಹೊಂದಿರುವ ಐಎನ್ಎಸ್ ನಿರೀಕ್ಷಕ್ ನೌಕೆಯನ್ನು ನಿಯೋಜಿಸಲಾಗಿದೆ.
ಭಾರತದ ತಟರಕ್ಷಣಾ ಪಡೆ ನಡೆಸುತ್ತಿರುವ ಶೋಧ ಮತ್ತು ರಕ್ಷಣಾ ಕಾರ್ಯಕ್ಕೆ ನೆರವಾಗಲು ಗೋವಾದಿಂದ ನೌಕಾಪಡೆಯ ವಿಮಾನ ಹಾಗೂ ನೌಕೆಗಳಾದ ತಿಲಂಚಾಂಗ್ ಮತ್ತು ಕಲ್ಪೇನಿಯನ್ನು ಈಗಾಗಲೇ ನಿಯೋಜಿಸಲಾಗಿದೆ. ಜೊತೆಗೆ, ಮುಳುಗುದಾರರ ತಂಡ ಹೊಂದಿರುವ ಗಸ್ತುನೌಕೆ ಐಎನ್ಎಸ್ ಸುಭದ್ರಾ ಕಾರವಾರದಿಂದ ಹೊರಟಿದೆ. ಮುಳುಗಿರುವ ಮೀನುಗಾರಿಕೆಯ ಬೋಟ್ ಅನ್ನು ಪತ್ತೆಹಚ್ಚಲು ತಜ್ಞ ಮುಳುಗುದಾರರ ತಂಡ ಕಾರ್ಯಾಚರಿಸುತ್ತಿದೆ ಎಂದು ನೌಕಾಸೇನೆಯ ಹೇಳಿಕೆ ತಿಳಿಸಿದೆ.
ಎಪ್ರಿಲ್ 13ರಂದು ಮಂಗಳೂರು ಬಳಿ ಅರಬ್ಬೀ ಸಮುದ್ರದಲ್ಲಿ ಸಂಭವಿಸಿದ ಮೀನುಗಾರಿಕಾ ಬೋಟ್ ದುರಂತದಲ್ಲಿ 3 ಮೀನುಗಾರರು ಮೃತರಾಗಿದ್ದು ಇಬ್ಬರನ್ನು ರಕ್ಷಿಸಲಾಗಿದೆ. ಬೋಟಿನಲ್ಲಿದ್ದ 9 ಮೀನುಗಾರರು ನಾಪತ್ತೆಯಾಗಿದ್ದಾರೆ.