ಐಪಿಎಲ್: ಪಂಜಾಬ್ ಕಿಂಗ್ಸ್ ವಿರುದ್ಧ ಡೆಲ್ಲಿ ಜಯಭೇರಿ
ಧವನ್ ಭರ್ಜರಿ ಬ್ಯಾಟಿಂಗ್: ರಾಹುಲ್, ಮಯಾಂಕ್ ಅರ್ಧಶತಕ ವ್ಯರ್ಥ
ಮುಂಬೈ: ಶಿಖರ್ ಧವನ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧದ ಐಪಿಎಲ್ ನ 11ನೇ ಪಂದ್ಯವನ್ನು 6 ವಿಕೆಟ್ ಗಳ ಅಂತರದಿಂದ ಗೆದ್ದುಕೊಂಡಿದೆ.
ಟಾಸ್ ಗೆದ್ದ ಡೆಲ್ಲಿ ತಂಡ ಪಂಜಾಬ್ ತಂಡವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿತು. ಪಂಜಾಬ್ ತಂಡ ನಾಯಕ ರಾಹುಲ್ (61, 51 ಎಸೆತ, 7 ಬೌಂ.,2 ಸಿ.) ಹಾಗೂ ಮಯಾಂಕ್ ಅಗರ್ವಾಲ್(69, 36 ಎಸೆತ, 7 ಬೌಂ., 4 ಸಿ.) ಮೊದಲ ವಿಕೆಟ್ ಗೆ ಸೇರಿಸಿದ 122 ರನ್ ನೆರವಿನಿಂದ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿತು.
ಗೆಲ್ಲಲು 196 ರನ್ ಗುರಿ ಬೆನ್ನಟ್ಟಿದ್ದ ಡೆಲ್ಲಿ ಕ್ಯಾಪಿಟಲ್ಸ್ 18.2 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತು.
ಶಿಖರ್ ಧವನ್ (92 ರನ್, 49 ಎಸೆತ, 13 ಬೌಂಡರಿ, 2 ಸಿಕ್ಸರ್)ಡೆಲ್ಲಿ ಗೆಲುವಿಗೆ ಮಹತ್ವದ ಕಾಣಿಕೆ ನೀಡಿದರು. ಪೃಥ್ವಿ ಶಾ(32)ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಶಿಖರ್ ಧವನ್ ಮೊದಲ ವಿಕೆಟ್ ಗೆ 59 ರನ್ ಜೊತೆಯಾಟ ನಡೆಸಿದರು. ಈ ಇಬ್ಬರು ಬೇರ್ಪಟ್ಟ ಬಳಿಕ ಸ್ಟೀವನ್ ಸ್ಮಿತ್(9), ರಿಷಭ್ ಪಂತ್ (15) ಬೇಗನೆ ವಿಕೆಟ್ ಒಪ್ಪಿಸಿದರು. ಮಾರ್ಕಸ್ ಸ್ಟೋನಿಸ್(27)ಹಾಗೂ ಲಲಿತ್ ಯಾದವ್ (12) ತಂಡದ ಗೆಲುವನ್ನು ಖಚಿತಪಡಿಸಿದರು.