ಕುಂಭ ಮೇಳದಲ್ಲಿ ಕೋವಿಡ್-19 ಸೋಂಕಿಗೆ ಒಳಗಾಗಿದ್ದವರು ಆಸ್ಪತ್ರೆಯಿಂದ ಪರಾರಿ

ಡೆಹ್ರಾಡೂನ್: ಉತ್ತರಾಖಂಡದ ಹರಿದ್ವಾರದಲ್ಲಿ ಕುಂಭ ಮೇಳದಲ್ಲಿ ಪಾಲ್ಗೊಂಡ ಬಳಿಕ ಕೋವಿಡ್-19 ಸೋಂಕಿಗೆ ತುತ್ತಾಗಿದ್ದ ಸುಮಾರು 19 ಜನರು ತಾವು ದಾಖಲಾದ ಆಸ್ಪತ್ರೆಯಿಂದ ಪರಾರಿಯಾಗಿದ್ದಾರೆ. ಪರಾರಿಯಾದವರು ಈ ರೋಗವನ್ನು ಇತರರಿಗೆ ಹರಡಬಹುದೆಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
TIMES OF INDIA ವರದಿಯ ಪ್ರಕಾರ, ಎಲ್ಲಾ 19 ರೋಗಿಗಳು ರಾಜಸ್ಥಾನದ ನಿವಾಸಿಗಳು. ಅವರು ಉತ್ತರಾಖಂಡದ ತೆಹ್ರಿ ಜಿಲ್ಲೆಯಲ್ಲಿ ಕೋವಿಡ್ ಗೆ ಚಿಕಿತ್ಸೆ ಪಡೆಯುತ್ತಿದ್ದರು.
"ಅವರು ಕುಂಭ ಮೇಳಕ್ಕೆ ಹೋಗಿದ್ದರು ಎಂದು ನಮಗೆ ತಿಳಿಸಲಾಯಿತು" ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು TIMES OF INDIA ಕ್ಕೆತಿಳಿಸಿದ್ದಾರೆ. ಘಟನೆ ಬಗ್ಗೆ ಅಧಿಕಾರಿಗಳನ್ನು ಎಚ್ಚರಿಸಲಾಗಿದೆ. ಇದಲ್ಲದೆ, ಈ ವಿಷಯಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸಲಾಗಿದೆ.
ಹರಿದ್ವಾರದಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಎಪ್ರಿಲ್ 10 ಮತ್ತು ಎಪ್ರಿಲ್ 14 ರ ನಡುವೆ 1,701 ಕೋವಿಡ್ -19 ಪ್ರಕರಣಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ಶುಕ್ರವಾರ ತಿಳಿಸಿತ್ತು.