ವಡೋದರಾ ಸ್ಮಶಾನದಲ್ಲಿ ಮುಸ್ಲಿಮರು ಸ್ವಯಂ ಸೇವಕರಾಗಿರುವುದಕ್ಕೆ ಬಿಜೆಪಿ ನಾಯಕರ ಆಕ್ಷೇಪ
"ಮುಸ್ಲಿಮರಿಗೆ ಸ್ಮಶಾನಕ್ಕೆ ಪ್ರವೇಶ ನೀಡಬಾರದು"
ಸಾಂದರ್ಭಿಕ ಚಿತ್ರ
ವಡೋದರ: ಕೋವಿಡ್ 2ನೇ ಅಲೆ ಆರಂಭಗೊಂಡಂದಿನಿಂದ ಅಂತ್ಯಕ್ರಿಯೆಗಳು ಪುರುಸೊತ್ತಿಲ್ಲದಂತೆ ನಡೆಯುತ್ತಿರುವ ನಗರದ ಖಾಸ್ವಾಡಿ ರುದ್ರಭೂಮಿಯಲ್ಲಿ ಮುಸ್ಲಿಂ ಸ್ವಯಂಸೇವಕರ ಉಪಸ್ಥಿತಿಗೆ ವಡೋದರಾದ ಬಿಜೆಪಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಪಕ್ಷ ನಾಯಕರೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಬಿಜೆಪಿಯ ವಡೋದರಾ ಘಟಕದ ಕೆಲ ಬಿಜೆಪಿ ನಾಯಕರು ಹಾಗೂ ಘಟಕದ ಅಧ್ಯಕ್ಷ ಡಾ ವಿಜಯ್ ಶಾ ಅವರು ಎಪ್ರಿಲ್ 16ರಂದು ಆಗಮಿಸಿದ ವೇಳೆ ಅಲ್ಲಿ ಚಿತಾಗಾರವನ್ನು ಸಿದ್ಧಪಡಿಸುವ ಕೆಲಸದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ನಿರತನಾಗಿರುವುದನ್ನು ಕಂಡು ಆಕ್ಷೇಪ ವ್ಯಕ್ತಪಡಿಸಿದ್ದರು. ನಂತರ ಶಾ ಅವರು ವಡೋದರಾ ಮುನಿಸಿಪಲ್ ಕಾರ್ಪೊರೇಶನ್ ಅಧಿಕಾರಿಗಳನ್ನು ಸಂಪರ್ಕಿಸಿ ಮುಸ್ಲಿಮರಿಗೆ ರುದ್ರಭೂಮಿಗೆ ಪ್ರವೇಶ ನೀಡಬಾರದೆಂದು ಹೇಳಿದ್ದರೆನ್ನಲಾಗಿದೆ.
ಚಿತಾಗಾರಕ್ಕೆ ಅಗತ್ಯ ವಸ್ತುಗಳನ್ನು ಪೂರೈಸುವ ಗುತ್ತಿಗೆದಾರರೊಬ್ಬರು ಉಪಗುತ್ತಿಗೆ ನೀಡಿದ್ದರು ಅಥವಾ ಹೆಚ್ಚು ಮುಸ್ಲಿಂ ಯುವಕರನ್ನು ಕೆಲಸಕ್ಕೆ ನೇಮಿಸಿದ್ದರು. "ಇದು ತಪ್ಪು. ಉತ್ತಮ ಕೆಲಸಕ್ಕೆ ಸ್ವಯಂಸೇವಕರಾಗುವುದು ಬೇರೆ ಹಾಗೂ ಧಾರ್ಮಿಕ ಪ್ರಕ್ರಿಯೆಗಳಲ್ಲಿ ತೊಡಗುವುದು ಬೇರೆ" ಎಂದು ಶಾ ನಂತರ ಸುದ್ದಿಗಾರರಿಗೆ ಹೇಳಿದ್ದಾರೆ.
ಆದರೆ ವಡೋದರಾದ ಇನ್ನು ಕೆಲ ಬಿಜೆಪಿ ನಾಯಕರು ಇದಕ್ಕೆ ಸಹಮತ ವ್ಯಕ್ತಪಡಿಸಿಲ್ಲ. ಪ್ರಸಕ್ತ ಸಾಂಕ್ರಾಮಿಕ ಸಂದರ್ಭದಲ್ಲಿ ಎಲ್ಲಾ ಸಮುದಾಯಗಳು ಜತೆಯಾಗಿ ಕೆಲಸ ಮಾಡಬೇಕು ಎಂದು ಮೇಯರ್ ಕೇಯುರ್ ರೊಕೇಡಿಯಾ ಹೇಳಿದ್ದು ಪ್ರಸಕ್ತ ವಿಚಾರವನ್ನು ಸೌಹಾರ್ದಯುತವಾಗಿ ಇತ್ಯರ್ಥಪಡಿಸಲಾಗುವುದು ಎಂದಿದ್ದಾರೆ.