ಮಂಗಳನ ಆಕಾಶದಲ್ಲಿ ಐತಿಹಾಸಿಕ ಹಾರಾಟ ನಡೆಸಿದ ಹೆಲಿಕಾಪ್ಟರ್

ವಾಶಿಂಗ್ಟನ್, ಎ. 19: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಸೋಮವಾರ ಮಂಗಳ ಗ್ರಹದ ಆಕಾಶದಲ್ಲಿ ಪುಟ್ಟ ಹೆಲಿಕಾಪ್ಟರ್ ‘ಇಂಜೀನ್ಯೂಟಿ’ಯನ್ನು ಯಶಸ್ವಿಯಾಗಿ ಹಾರಿಸಿದೆ. ಇದು ಭೂಮಿಯಿಂದ ಹೊರಗಿನ ಗ್ರಹವೊಂದರಲ್ಲಿ ನಡೆದ ಮೊದಲ ವಿಮಾನ ಹಾರಾಟವಾಗಿದೆ.
ಸುಮಾರು 1.8 ಕಿಲೋಗ್ರಾಂ ಭಾರದ ರೋಟೊಕ್ರಾಫ್ಟ್ ಭಾರತೀಯ ಕಾಲಮಾನ ಮಧ್ಯಾಹ್ನ 1:04ರ ಸುಮಾರಿಗೆ ಮಂಗಳನ ನೆಲದಿಂದ ಮೇಲಕ್ಕೇರಿತು. ಅದು 10 ಅಡಿ ಎತ್ತರದಲ್ಲಿ ಸುತ್ತಾಡಿತು. 39.1 ನಿಮಿಷಗಳ ಬಳಿಕ ಅದು ನೆಲಸ್ಪರ್ಶ ಮಾಡಿತು ಎಂಬುದಾಗಿ ನಾಸಾ ತಿಳಿಸಿದೆ.
ಹಾರಾಟದ ಮೂರು ಗಂಟೆಗಳಿಗೂ ಅಧಿಕ ಅವಧಿಯ ಬಳಿಕ, ಅದರ ದತ್ತಾಂಶವು 27.8 ಕೋಟಿ ಕಿಲೋಮೀಟರ್ ದೂರದ ಭೂಮಿಯನ್ನು ತಲುಪಿತು.
ಕ್ಯಾಲಿಫೋರ್ನಿಯದ ಜೆಟ್ ಪ್ರೊಪಲ್ಶನ್ ಲ್ಯಾಬರೇಟರಿಯಲ್ಲಿ ಹಾರಾಟವನ್ನು ನಿಯಂತ್ರಿಸಲಾಗಿತ್ತು. ಅಲ್ಲಿ ಆರು ವರ್ಷಗಳಿಂದ ಇದಕ್ಕಾಗಿ ಸಿದ್ಧತೆಗಳು ನಡೆಯುತ್ತಿದ್ದವು.
‘ಇಂಜೀನ್ಯೂಟಿ’ಯಲ್ಲಿರುವ ತಳವನ್ನು ದಿಟ್ಟಿಸುವ ಕ್ಯಾಮರದಿಂದ ತೆಗೆದ ಅದರ ನೆರಳಿನ ಕಪ್ಪು-ಬಿಳುಪು ಚಿತ್ರವನ್ನು ಅದು ತಕ್ಷಣ ಭೂಮಿಗೆ ಕಳುಹಿಸಿತು. ಬಳಿಕ, ‘ಇಂಜೀನ್ಯೂಟಿ’ ನೆಲದಲ್ಲಿರುವ, ಹಾರಾಟದಲ್ಲಿರುವ ಹಾಗೂ ಭೂಸ್ಪರ್ಶ ಮಾಡಿರುವ ಬಣ್ಣದ ವೀಡಿಯೊವನ್ನು ‘ಪರ್ಸಿವರನ್ಸ್’ ಕಳುಹಿಸಿತು.
ಪರ್ಸಿವರನ್ಸ್ ಮಂಗಳ ಗ್ರಹದಲ್ಲಿ ಇಳಿದಿರುವ ಶೋಧ ನೌಕೆಯಾಗಿದೆ.