ಕೊರೋನ ಸೋಂಕಿನ ಭೀತಿಯಿಂದ ನಿವೃತ್ತ ಸಿಐಡಿ ಅಧಿಕಾರಿಯನ್ನು ತ್ಯಜಿಸಿದ ಕುಟುಂಬ !
ಬಾಗಿಲಿನಲ್ಲಿ "ನಾನು ಸತ್ತರೆ, ನನ್ನ ಮೃತದೇಹವನ್ನು ಪೊಲೀಸರಿಗೆ ಹಸ್ತಾಂತರಿಸಿ" ಎಂಬ ಪೋಸ್ಟರ್

ಫೋಟೊ ಕೃಪೆ: India Today
ಹೊಸದಿಲ್ಲಿ, ಎ. 19: ಕೊರೋನ ಸೋಂಕಿಗೊಳಗಾದ ಕಾರಣಕ್ಕೆ ನಿವೃತ್ತ ಸಿಐಡಿ ಆಧಿಕಾರಿಯೊಬ್ಬರನ್ನು ಕುಟುಂಬ ಮನೆಯಲ್ಲೇ ತ್ಯಜಿಸಿ ತೆರಳಿದ ಆಘಾತಕಾರಿ ಘಟನೆ ದಿಲ್ಲಿಯಲ್ಲಿ ನಡೆದಿದೆ. ದಿಲ್ಲಿ ಪೊಲೀಸ್ ಕಾನ್ಸ್ಟೆಬಲ್ ಓರ್ವರು ಸೋಮವಾರ ಅವರನ್ನು ರಕ್ಷಿಸಿದ್ದಾರೆ. ದಿಲ್ಲಿಯ ಹಳೆ ರಾಜೇಂದ್ರ ನಗರ ಪ್ರದೇಶದ ನಿವಾಸಿಯಾಗಿರುವ 80 ವರ್ಷದ ಮುರಳಿಧರ ಅವರು ಕೊರೋನ ಸೋಂಕಿಗೊಳಗಾಗಿದ್ದರು. ರೋಗ ಹರಡುವ ಭೀತಿಯಿಂದ ಅವರ ಕುಟುಂಬ ಅವರನ್ನು ಇಲ್ಲಿನ ಮೂರು ಮಹಡಿಯ ಮನೆಯಲ್ಲಿ ಏಕಾಂಗಿಯಾಗಿ ತ್ಯಜಿಸಿ ತೆರಳಿತ್ತು.
ಕೊರೋನ ಹರಡುವ ಭೀತಿಯಿಂದ ಮುರಳೀಧರ್ ಅವರನ್ನು ಮನೆಯಲ್ಲಿ ಏಕಾಂಗಿಯಾಗಿ ತ್ಯಜಿಸಿ ಅವರ ಕುಟುಂಬ ತೆರಳಿದೆ ಎಂದು ಅವರ ಪುತ್ರಿ ದಿಲ್ಲಿ ಪೊಲೀಸ್ ಪಿಸಿಆರ್ಗೆ ಕರೆ ಮಾಡಿ ತಿಳಿಸಿದ ಬಳಿಕ ಈ ವಿಚಾರ ಬೆಳಕಿಗೆ ಬಂದಿತು. ದೂರಿನ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ದಿಲ್ಲಿ ಪೊಲೀಸ್ ಕಾನ್ಸ್ಟೆಬಲ್ ರಾಜು ರಾಮ್ ನೆರವು ನೀಡಲು ಮುರಳೀಧರ್ ಅವರ ಮನೆಗೆ ಭೇಟಿ ನೀಡಿದರು.
ಅಲ್ಲಿ ಮುರಳೀಧರ ಅವರು ನಿವೃತ್ತ ಸಿಐಡಿ ಅಧಿಕಾರಿ ಎಂದು ತಿಳಿದು ಹಾಗೂ ಮನೆಯ ಹೊರಗೆ, ‘‘ನಾನು ಸತ್ತರೆ, ನನ್ನ ಮೃತದೇಹವನ್ನು ಪೊಲೀಸರಿಗೆ ಹಸ್ತಾಂತರಿಸಿ’’ ಎಂದು ಬರೆದ ಪೋಸ್ಟರ್ ಅನ್ನು ನೋಡಿ ಅಚ್ಚರಿಗೊಂಡರು. ಕಾನ್ಸ್ಟೆಬಲ್ ರಾಜು ರಾಮು ಅವರು ಮುರಳೀಧರ್ ಅವರನ್ನು ಭೇಟಿಯಾಗಿ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗುವಂತೆ ಮನವೊಲಿಸಿದರು. ಆರಂಭದಲ್ಲಿ ಅವರು ನಿರಾಕರಿಸಿದರು. ಅನಂತರ ಒಪ್ಪಿದರು. ಬಳಿಕ ಅವರನ್ನು ಚಿಕಿತ್ಸೆಗೆ ರಾಮ ಮನೋಹನರ ಲೋಹಿಯಾ ಆಸ್ಪತ್ರೆಗೆ ವರ್ಗಾಯಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಮುರಳೀಧರ ಅವರಿಗೆ ಮೂವರು ಪುತ್ರಿಯರು. ಇಬ್ಬರು ಪುತ್ರಿಯರು ದಿಲ್ಲಿಯಲ್ಲಿ ವಾಸಿಸುತ್ತಿದ್ದಾರೆ. ಇನ್ನೊಬ್ಬರು ವಿದೇಶದಲ್ಲಿ ಇದ್ದಾರೆ. ಕೊರೋನ ಸೋಂಕಿನ ಕಾರಣಕ್ಕೆ ಅವರನ್ನು ತ್ಯಜಿಸುವ ಮುನ್ನ ಅವರೊಂದಿಗೆ ಯಾರಿದ್ದರು ಎಂಬುದು ಸ್ಪಷ್ಟವಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.