ಕೋವಿಡ್-19: ದೇಶದಲ್ಲಿ 20 ಲಕ್ಷ ದಾಟಿದ ಸಕ್ರಿಯ ಪ್ರಕರಣ
ಹೊಸದಿಲ್ಲಿ, ಎ.20: ದೇಶದಲ್ಲಿ ಕಳೆದ ಒಂದು ವಾರದಲ್ಲಿ 7.7 ಲಕ್ಷ ಸಕ್ರಿಯ ಕೊರೋನ ವೈರಸ್ ಸೋಂಕು ಪ್ರಕರಣಗಳು ಸೇರ್ಪಡೆಯಾಗಿದ್ದು, ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 20 ಲಕ್ಷದ ಗಡಿ ದಾಟಿದೆ.
ದೇಶದಲ್ಲಿ ಸದ್ಯಕ್ಕೆ 20,30,725 ಸಕ್ರಿಯ ಪ್ರಕರಣಗಳಿದ್ದು, ಆರೋಗ್ಯ ಮೂಲಸೌಕರ್ಯದ ಮೇಲೆ ಅಧಿಕ ಒತ್ತಡ ಬಿದ್ದಿದೆ. ದೇಶದ ಎಲ್ಲೆಡೆಯಿಂದ ಐಸಿಯು ಬೆಡ್‌ಗಳ ಕೊರತೆ, ಆಮ್ಲಜನಕ ಸಿಲಿಂಡರ್ ಸೇರಿದಂತೆ ಪ್ರಮುಖ ವೈದ್ಯಕೀಯ ಸಾಧನಗಳ ಕೊರತೆ ಬಗ್ಗೆ ವರದಿಯಾಗುತ್ತಿದೆ.
ಎಪ್ರಿಲ್ 10ರಂದು ದೇಶದ ಸಕ್ರಿಯ ಪ್ರಕರಣಗಳು 10 ಲಕ್ಷದ ಗಡಿ ದಾಟಿದ ಹತ್ತು ದಿನಗಳ ಒಳಗಾಗಿ ಮತ್ತೆ 10 ಲಕ್ಷ ಸಕ್ರಿಯ ಪ್ರಕರಣಗಳು ಸೇರಿಕೊಂಡಿವೆ. ಇದು ದೇಶದಲ್ಲಿ ದಾಖಲಾದ ಗರಿಷ್ಠ ಸಕ್ರಿಯ ಪ್ರಕರಣಗಳ ಸಂಖ್ಯೆಯಾಗಿದೆ.
ಸತತ ಮೂರನೇ ದಿನ ಭಾರತದ ದೈನಿಕ ಪ್ರಕರಣಗಳ ಸಂಖ್ಯೆ 2.5 ಲಕ್ಷಕ್ಕಿಂತ ಅಧಿಕ ಇದ್ದು, ಸೋಮವಾರ 2,56,596 ಪ್ರಕರಣಗಳು ವರದಿಯಾಗಿವೆ. ಅಂತೆಯೇ ದಾಖಲೆ 1,757 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ದೇಶದ ಒಟ್ಟಾರೆ ಪ್ರಕರಣಗಳ ಸಂಖ್ಯೆ ಇದೀಗ 1.53 ಕೋಟಿ ಆಗಿದ್ದು, ಅಮೆರಿಕದ ಬಳಿಕ ಇದು ಅತ್ಯಧಿಕ ಸಂಖ್ಯೆಯಾಗಿದೆ. ದೇಶದಲ್ಲಿ ಇದುವರೆಗೆ 1.54 ಲಕ್ಷ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ಮೊದಲ ಅಲೆಯಲ್ಲಿ ದೇಶದಲ್ಲಿ ಪ್ರಕರಣಗಳ ಸಂಖ್ಯೆ ಉತ್ತುಂಗವನ್ನು ತಲುಪಿದ್ದಾಗ ಅಂದರೆ 2020ರ ಸೆಪ್ಟಂಬರ್ 15ರಿಂದ 20ರ ಅವಧಿಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 10 ಲಕ್ಷದ ಆಸುಪಾಸಿನಲ್ಲಿತ್ತು. ಇಡೀ ವಿಶ್ವದಲ್ಲೇ 20 ಲಕ್ಷಕ್ಕಿಂತ ಅಧಿಕ ಸಕ್ರಿಯ ಪ್ರಕರಣಗಳು ಅಮೆರಿಕ ಮತ್ತು ಭಾರತದಲ್ಲಿ ಮಾತ್ರ ದಾಖಲಾಗಿವೆ. ಅಮೆರಿಕದಲ್ಲಿ 69 ಲಕ್ಷ ಸಕ್ರಿಯ ಪ್ರಕರಣಗಳು ಜನವರಿಯಲ್ಲಿ ವರದಿಯಾಗಿದ್ದವು. ಬ್ರೆಝಿಲ್‌ನಲ್ಲಿ ಗರಿಷ್ಠ ಅಂದರೆ 13 ಲಕ್ಷ ಸಕ್ರಿಯ ಪ್ರಕರಣಗಳು ವರದಿಯಾಗಿವೆ.