ಚಿಕ್ಕಮಗಳೂರು: ಮದ್ಯ ಸಾಗಿಸುತ್ತಿದ್ದ ಲಾರಿ ಪಲ್ಟಿ; ಬಿಯರ್ ಬಾಟಲಿಗಳಿಗೆ ಮುಗಿಬಿದ್ದ ಜನತೆ

ಚಿಕ್ಕಮಗಳೂರು, ಎ.20: ಬಿಯರ್ ಬಾಟಲುಗಳನ್ನು ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಪಲ್ಟಿಯಾದ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿಯಲ್ಲಿ ನಡೆದಿದ್ದು, ಮದ್ಯಕ್ಕಾಗಿ ಜನರು ಮುಗಿಬಿದ್ದ ಘಟನೆ ವರದಿಯಾಗಿದೆ.
ಲಾರಿ ಪಲ್ಟಿಯಾದ ಪರಿಣಾಮ ಮದ್ಯದ ಬಾಟಲಿಗಳು ರಸ್ತೆಗೆ ಉರುಳಿ ಬಿದ್ದುದನ್ನು ಕಂಡ ಗ್ರಾಮದ ಜನರು ಮದ್ಯದ ಬಾಟಲಿಗಳನ್ನು ಹೆಕ್ಕಿಕೊಳ್ಳಲು ಮುಗಿಬಿದ್ದಿದ್ದಾರೆ.
ಕಿಂಗ್‍ಫಿಶರ್ ಕಂಪೆನಿಯ ಬಿಯರ್ ಬಾಟಲಿಗಳನ್ನು ತುಂಬಿಕೊಂಡು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಲಾರಿ ಮಂಗಳವಾರ ಮಧ್ಯಾಹ್ನ ತರೀಕೆರೆ ತಾಲೂಕಿನ ಎಂ.ಸಿ.ಹಳ್ಳಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಈ ವೇಳೆ ಲಾರಿಯಲ್ಲಿದ್ದ ಮದ್ಯದ ಬಾಟಲಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿವೆ. ಇದನ್ನು ಕಂಡ ಗ್ರಾಮದ ಯುವಕರೂ ಸೇರಿದಂತೆ ವಯೋವೃದ್ಧರು, ಮಹಿಳೆಯರು ಒಮ್ಮೆಲೆ ಲಾರಿಗೆ ಮುತ್ತಿಗೆ ಹಾಕಿ ಕೈಗೆ ಸಿಕ್ಕಷ್ಟು ಬಿಯರ್ ಬಾಟಲಿಗಳನ್ನು ಕೊಂಡೊಯ್ದಿದ್ದಾರೆ.
ಸುದ್ದಿ ತಿಳಿದ ಮತ್ತಷ್ಟು ಜನರು ಪಲ್ಟಿಯಾಗಿದ್ದ ಲಾರಿಯಲ್ಲಿದ್ದ ಬಾಕ್ಸ್ ಗಟ್ಟಲೆ ಬಿಯರ್ ಬಾಟಲಿಗಳನ್ನು ಹೊತ್ತೊಯ್ಯಲು ಆಗಮಿಸಿದ್ದರಿಂದ ಸ್ಥಳದಲ್ಲಿ ಜನಜಂಗುಳಿ ನಿರ್ಮಾಣವಾಗಿತ್ತು. ಕೂಡಲೇ ಸ್ಥಕ್ಕೆ ತರೀಕೆರೆ ಪೊಲೀಸರು ಬಂದು ಜನರನ್ನು ನಿಯಂತ್ರಿಸಲು ಪ್ರಯತ್ನಿಸಿದರಾದರೂ ಅಷ್ಟರಲ್ಲಾಗಲೇ ಲಾರಿಯಲ್ಲಿದ್ದ ಅರ್ಧದಷ್ಟು ಬಿಯರ್ ಬಾಟಲಿಗಳು ನಾಪತ್ತೆಯಾಗಿದ್ದವು. ಪೊಲೀಸರು ಲಾಠಿ ಬೀಸಿದರೂ ಜನರು ಮಾತ್ರ ಲಾಠಿ ಏಟು ತಿನ್ನುತ್ತಲೇ ಬಿಯರ್ ಬಾಟಲಿಗಳಿಗಾಗಿ ತಡಕಾಡುತ್ತಿದ್ದ ದೃಶ್ಯ ಕಂಡು ಬಂತು.
ಅಪಘಾತದಲ್ಲಿ ಲಾರಿ ಚಾಲಕ ಹಾಗೂ ಮತ್ತೋರ್ವ ಸಿಬ್ಬಂದಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆ ಸಂಬಂಧ ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಗ್ರಾಮದ ಜನರು ಪಲ್ಟಿಯಾಗಿ ಬಿದ್ದಿದ್ದ ಲಾರಿಯಲ್ಲಿನ ಬಿಯರ್ ಬಾಟಲಿಗಳನ್ನು ಪೊಲೀಸರ ಲಾಠಿಗೂ ಬಗ್ಗದೇ ಆರಿಸಿಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.







