ಮನೆಗೆ ಹೋಗಬೇಡಿ, ದಿಲ್ಲಿ ಪ್ರತಿಭಟನೆಯಲ್ಲಿ ಸೇರಿಕೊಳ್ಳಿ: ವಲಸೆ ಕಾರ್ಮಿಕರಿಗೆ ಕಿಸಾನ್ ಮೋರ್ಚಾ ಮನವಿ
ರೈತ ಸಂಘಟನೆಗಳಿಂದ ಕಾರ್ಮಿಕರಿಗೆ ವಿತರಿಸಲು ಆಹಾರ ಪೊಟ್ಟಣ ತಯಾರಿ ಆರಂಭ
ಬತಿಂಡಾ: ವಲಸೆ ಕಾರ್ಮಿಕರು ದೊಡ್ಡ ದೊಡ್ಡ ನಗರಗಳಿಂದ ತಮ್ಮೂರಿಗೆ ವಾಪಸಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಸಂಯುಕ್ತ ಕಿಸಾನ್ ಮೋರ್ಚಾ ನಿಮ್ಮ ಪ್ರಾಣಕ್ಕೆ ಅಪಾಯ ತಂದುಕೊಳ್ಳಬೇಡಿ, ದಿಲ್ಲಿ ಗಡಿಯಲ್ಲಿರುವ ಸುರಕ್ಷಿತ ತಾಣಗಳಿಗೆ ಬನ್ನಿ ಎಂದು ಒತ್ತಾಯಿಸಿದೆ.
“ಎಲ್ಲಿಯವರೆಗೆ ರೈತ ಪ್ರತಿಭಟನೆಗಳು ನಡೆಯುತ್ತವೆಯೋ, ಅಲ್ಲಿಯವರೆಗೆ ವಲಸೆ ಕಾರ್ಮಿಕರು ಪ್ರತಿಭಟನಾ ಸ್ಥಳಗಳಿಗೆ ಸೇರಬಹುದು. ಅಲ್ಲಿ ರೈತರು ಮತ್ತು ಸಾಮಾಜಿಕ ಕಲ್ಯಾಣ ಸಂಸ್ಥೆಗಳು ಎಲ್ಲರಿಗೂ ಆಶ್ರಯ ಮತ್ತು ಆಹಾರಕ್ಕಾಗಿ ವ್ಯವಸ್ಥೆ ಮಾಡುತ್ತಾರೆ. ಇದರೊಂದಿಗೆ ಅವರು ಹೋರಾಟದಲ್ಲಿ ಸಹ ಭಾಗವಹಿಸಬಹುದು ಹಾಗೂ ಸರಕಾರದ ವಿರುದ್ಧ ಒಂದಾಗಿ ಹೋರಾಡಬಹುದು”ಎಂದು ಕಿಸಾನ್ ಮೋರ್ಚಾ ಹೇಳಿದೆ.
ಕಳೆದ ವರ್ಷ ಸಾರ್ವಜನಿಕ ಸಾರಿಗೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದ್ದರಿಂದ ಸಾವಿರಾರು ವಲಸೆ ಕಾರ್ಮಿಕರು ತಮ್ಮ ಗಂಟುಮೂಟೆ ಹಾಗೂ ಮಕ್ಕಳೊಂದಿಗೆ ತಮ್ಮೂರಿಗೆ ತೆರಳಲು ಎದುರಿಸಿದ ಕಷ್ಟಗಳನ್ನು ನೆನಪಿಸಿಕೊಂಡ ಮೋರ್ಚಾ ನಾಯಕ ಮಂಜಿತ್ ಸಿಂಗ್ ಧನೇರ್ “ಆ ಶೋಚನೀಯ ಪರಿಸ್ಥಿತಿ ಪುನರಾವರ್ತನೆಯಾಗಲು ನಾವು ಬಯಸುವುದಿಲ್ಲ. ನೀವು ದಿಲ್ಲಿ ಗಡಿಯಲ್ಲಿ ಪ್ರತಿಭಟನಾ ತಾಣಗಳಿಗೆ ಬಂದರೆ ಉತ್ತಮ’’ಎಂದರು.
ಪ್ರತಿಭಟನೆ ಮುಂದುವರಿದರೆ ವಲಸೆ ಕಾರ್ಮಿಕರು ಆರು ತಿಂಗಳವರೆಗೆ ಅಥವಾ ದೀರ್ಘ ಸಮಯ ಪ್ರತಿಭಟನಾ ಸ್ಥಳಗಳಲ್ಲಿ ಆಹಾರವನ್ನು ಪಡೆಯುತ್ತಾರೆ ಎಂದು ಬಿಕೆಯು-ಚರುಣಿ ನಾಯಕ ಗುರ್ನಮ್ ಸಿಂಗ್ ಚಾರುನಿ ಹೇಳಿದರು.
ಘಾಜಿಪುರ ಗಡಿಯಲ್ಲಿನ ರೈತ ಸಂಘಟನೆಗಳು ದಿಲ್ಲಿಯ ವಿವಿಧ ಬಸ್ ನಿಲ್ದಾಣಗಳು ಹಾಗೂ ರೈಲು ನಿಲ್ದಾಣಗಳಲ್ಲಿ ವಿತರಿಸಲು ಆಹಾರ ಪ್ಯಾಕೆಟ್ಗಳನ್ನು ತಯಾರಿಸಲು ಪ್ರಾರಂಭಿಸಿವೆ, ಅಲ್ಲಿ ವಲಸೆ ಕಾರ್ಮಿಕರು ಮನೆಗೆ ಮರಳಲು ತಮ್ಮ ಪ್ರಾಣವನ್ನು ಪಣಕ್ಕಿಡುತ್ತಿದ್ದಾರೆ.