'ಆರೋಗ್ಯ ತುರ್ತು ಪರಿಸ್ಥಿತಿ' ಘೋಷಣೆ ಮಾಡಿ: ಮುಖ್ಯಮಂತ್ರಿಗೆ ಪತ್ರ ಬರೆದ ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು, ಎ. 21: ಕೋವಿಡ್ ಎರಡನೆ ಅಲೆ ಏರಿಕೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 'ಆರೋಗ್ಯ ತುರ್ತು ಪರಿಸ್ಥಿತಿ' ಘೋಷಣೆ ಮಾಡಿ, ಸಮರೋಪಾದಿಯಲ್ಲಿ ಸೋಂಕಿತರ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಗಂಭೀರ ಸ್ವರೂಪದ ಸೋಂಕಿತರಿಗೆ ಆಕ್ಸಿಜನ್ ನೀಡಲು ಅಗತ್ಯವಿರುವ ಸಾವಿರಾರು ವೆಂಟಿಲೇಟರ್ ಗಳು ಸರಕಾರಿ ಉಗ್ರಾಣದಲ್ಲಿ ಉಳಿದಿವೆ ಎಂದು ಗೊತ್ತಾಗಿದೆ. ಕೂಡಲೇ ಕಾರ್ಯೋನ್ಮುಖವಾಗಿ ಆ ವೆಂಟಿಲೇಟರ್ ಗಳನ್ನು ತಜ್ಞರಿಂದ ಪರಿಶೀಲಿಸಿ ತುರ್ತು ಬಳಕೆಗೆ ಮುಂದಾಗಬೇಕು ಎಂದು ದೇವೇಗೌಡ ಕೋರಿದ್ದಾರೆ.
ಆಸ್ಪತ್ರೆಗಳಲ್ಲಿ ನುರಿತ ತಜ್ಞರ ಕೊರತೆ ಇದ್ದು ಸರಕಾರ ಕೂಡಲೇ ಗುತ್ತಿಗೆ ಆಧಾರದ ಮೇಲೆ ತಜ್ಞರ ನೇಮಕದ ಹೊಣೆಯನ್ನು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಬೇಕು. ಅಲ್ಲದೆ, ಈ ನಿಟ್ಟಿನಲ್ಲಿ ಸರಕಾರ ತುರ್ತು ಕ್ರಮ ಕೈಗೊಳ್ಳಬೇಕು. ರಾಜ್ಯ ಸರಕಾರ ಸೋಂಕಿತರ ಚಿಕಿತ್ಸೆಗೆ ಅಗತ್ಯ ವಿರುವ ವೈದ್ಯಕೀಯ ಸೌಲಭ್ಯ ಸೇರಿದಂತೆ ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲು ಆಸ್ಥೆ ವಹಿಸಬೇಕು ಎಂದು ದೇವೇಗೌಡ ಪತ್ರದಲ್ಲಿ ಸಲಹೆ ನೀಡಿದ್ದಾರೆ.





