ಮಸೀದಿಗಳಲ್ಲಿ ನಮಾಝ್ ಗೆ ಅವಕಾಶ ಕೋರಿ ಸರಕಾರಕ್ಕೆ ವಕ್ಫ್ ಬೋರ್ಡ್ ಸದಸ್ಯರ ಮನವಿ
ಬೆಂಗಳೂರು, ಎ.21: ರಮಝಾನ್ ಮಾಸದಲ್ಲಿ ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲು ಅವಕಾಶ ನೀಡಬೇಕು. ಅಲ್ಲದೆ, ರಾತ್ರಿ ಕರ್ಫ್ಯೂ ಸಮಯವನ್ನು ರಾತ್ರಿ 9.30 ರಿಂದ ಬೆಳಗ್ಗೆ 5.30ರವರೆಗೆ ಪರಿಷ್ಕರಣೆ ಮಾಡಬೇಕು ಎಂದು ರಾಜ್ಯ ಸರಕಾರಕ್ಕೆ ವಕ್ಫ್ ಬೋರ್ಡ್ ಸದಸ್ಯರು ಮನವಿ ಮಾಡಿದ್ದಾರೆ.
ಬುಧವಾರ ಝೂಮ್ ಆಪ್ ಮೂಲಕ ಸಭೆ ನಡೆಸಿದ ಸಭೆಯಲ್ಲಿ ವಕ್ಫ್ ಬೋರ್ಡ್ ಸದಸ್ಯರಾದ ತನ್ವೀರ್ ಸೇಠ್, ಸೈಯದ್ ನಾಸೀರ್ ಹುಸೇನ್, ಮೌಲಾನ ಶಾಫಿ ಸಅದಿ, ಕೆ.ಅನ್ವರ್ ಬಾಷ, ಮೌಲಾನ ಮೀರ್ ಅಝರ್ ಹುಸೇನ್, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್ ಪಿ.ಮಣಿವಣ್ಣನ್, ವಕ್ಫ್ ಬೋರ್ಡ್ ಸಿಇಒ ಮುಹಮ್ಮದ್ ಯೂಸುಫ್, ಎಸಿಇಒ ಡಾ.ಮಾಝುದ್ದೀನ್ ಖಾನ್ ಸೇರಿದಂತೆ ಇನ್ನಿತರ ಉಲಮಾಗಳು ಪಾಲ್ಗೊಂಡಿದ್ದರು.
ಮದುವೆ ಸಮಾರಂಭಗಳಿಗೆ 50 ಜನ ಸೇರುವಂತೆ ಅವಕಾಶ ಕಲ್ಪಿಸಲಾಗಿದೆ. ಅದೇ ರೀತಿ, ಮಸೀದಿಗಳಲ್ಲಿ ನಮಾಝ್ ನಿರ್ವಹಿಸಲು ಕೋವಿಡ್ ನಿಯಮಾವಳಿಗಳ ಅನ್ವಯ ಅವಕಾಶ ನೀಡಿದರೆ ಉತ್ತಮ ಎಂದು ವಕ್ಫ್ ಬೋರ್ಡ್ ಸದಸ್ಯರು ಹಾಗೂ ಉಲಮಾಗಳು ಸರಕಾರಕ್ಕೆ ಮನವಿ ಮಾಡಿದರು.
ಸಭೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಕೋವಿಡ್ ಪರಿಸ್ಥಿತಿ, ಆಸ್ಪತ್ರೆಗಳಲ್ಲಿ ಆಕ್ಸಿಜನ್, ಹಾಸಿಗೆಗಳ ಕೊರತೆ ಸಂಬಂಧ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು. ವಕ್ಫ್ ಬೋರ್ಡ್ ಸದಸ್ಯರ ಮನವಿಯನ್ನು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯ ಗಮನಕ್ಕೆ ತರುವುದಾಗಿ ಕ್ಯಾಪ್ಟನ್ ಮಣಿವಣ್ಣನ್ ಭರವಸೆ ನೀಡಿದರು.







