ಮಸೀದಿಗಳಲ್ಲಿ ಪ್ರಾರ್ಥನೆಗೆ ಅವಕಾಶ ಮಾಡಿಕೊಡುವಂತೆ ಉಲಮಾಗಳ ನಿಯೋಗದಿಂದ ಸರಕಾರಕ್ಕೆ ಮನವಿ
ಬೆಂಗಳೂರು, ಎ.21: ರಾಜ್ಯ ಸರಕಾರವು ಕೋವಿಡ್ ಹಿನ್ನೆಲೆಯಲ್ಲಿ ಧಾರ್ಮಿಕ ಕೇಂದ್ರಗಳನ್ನು ಮುಚ್ಚಲು ಆದೇಶಿಸಿರುವ ಹಿನ್ನೆಲೆಯಲ್ಲಿ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ನಗರದ ಪ್ರಮುಖ ಉಲಮಾಗಳು ಬುಧವಾರ ದಾರೂಲ್ ಉಲೂಮ್ ಸಬೀಲುರ್ರಶಾದ್‍ನಲ್ಲಿ ಸಭೆ ನಡೆಸಿದರು.
ಆನಂತರ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರನ್ನು ಭೇಟಿ ಮಾಡಿ ರಮಝಾನ್ ಮಾಸದ ಹಿನ್ನೆಲೆಯಲ್ಲಿ ಮಸೀದಿಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ಪ್ರಾರ್ಥನೆ ನಿರ್ವಹಿಸಲು ಅವಕಾಶ ಮಾಡಿಕೊಡಬೇಕು ಎಂದು ಉಲಮಾಗಳ ನಿಯೋಗ ಮನವಿ ಮಾಡಿತು.
ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ರಾಜ್ಯ ಸರಕಾರ ಕೋವಿಡ್ ಸೋಂಕು ಹರಡುವುದನ್ನು ತಡೆಗಟ್ಟಲು ರಾತ್ರಿ ಕರ್ಫ್ಯೂ ಜಾರಿ ಮಾಡಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ, ಮಸೀದಿ, ಮಂದಿರ ಸೇರಿದಂತೆ ಧಾರ್ಮಿಕ ಕೇಂದ್ರಗಳನ್ನು ಮುಚ್ಚಿರುವುದಕ್ಕೆ ಆಕ್ಷೇಪವಿದೆ ಎಂದರು.
ಈ ಹಿಂದೆ ಸರಕಾರ ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ರಾತ್ರಿ ಕರ್ಫ್ಯೂ ವಿಧಿಸಿತ್ತು. ಈ ಅವಧಿಯಲ್ಲಿ ನಾವು ತರಾವೀಹ್ ನಮಾಝ್ ಹಾಗೂ ಬೆಳಗಿನ ಫಜರ್ ನಮಾಝ್ ಅನ್ನು ನಿರ್ವಹಿಸಿಕೊಳ್ಳುತ್ತಿದ್ದೇವು. ಇದೀಗ ಅದನ್ನು ಪರಿಷ್ಕರಿಸಿ ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಮಾಡಿದ್ದಾರೆ ಎಂದು ಅವರು ಹೇಳಿದರು.
ರಮಝಾನ್ ಮಾಸವಾಗಿರುವುದರಿಂದ ನಮಗೆ ಮಸೀದಿಗಳಲ್ಲಿ ಪ್ರಾರ್ಥನೆ ಮಾಡಲು ಅವಕಾಶ ನೀಡಬೇಕು. ವಾರಾಂತ್ಯದ ಕರ್ಫ್ಯೂ ಬಗ್ಗೆ ನಮ್ಮ ಅಭ್ಯಂತರವಿಲ್ಲ. ಅದನ್ನು ನಾವು ಪಾಲಿಸುತ್ತೇವೆ. ಕಳೆದ ವರ್ಷ ಸಂಪೂರ್ಣ ಲಾಕ್‍ಡೌನ್ ಇದ್ದಾಗ ನಾವು ಮನೆಗಳಲ್ಲೆ ನಮಾಝ್ ಮಾಡಿದ್ದೇವೆ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಧಾರ್ಮಿಕ ಕೇಂದ್ರಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಪಾಲನೆ ಮಾಡಿಕೊಂಡು ತೆರೆಯಲು ಅವಕಾಶ ನೀಡಿದರೆ, ಮಸೀದಿ, ಮಂದಿರ, ಚರ್ಚ್ ಗಳಿಗೆ ಭಕ್ತಾದಿಗಳು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲು ಅನುಕೂಲವಾಗುತ್ತದೆ. ಕಂದಾಯ ಸಚಿವ ಆರ್.ಅಶೋಕ್, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ನಮ್ಮ ಮನವಿಯನ್ನು ಸಲ್ಲಿಸಿದ್ದು, ಮುಖ್ಯಮಂತ್ರಿಯ ಗಮನಕ್ಕೆ ತಂದು ಪರಿಶೀಲಿಸುವುದಾಗಿ ಹೇಳಿದ್ದಾರೆ ಎಂದು ಅವರು ತಿಳಿಸಿದರು.
ನಿಯೋಗದಲ್ಲಿ ಮಾಜಿ ಸಚಿವ ನಸೀರ್ ಅಹ್ಮದ್, ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್, ಮೌಲಾನ ಮಕ್ಸೂದ್ ಇಮ್ರಾನ್, ಮುಫ್ತಿ ಇಫ್ತಿಖಾರ್ ಅಹ್ಮದ್ ಖಾಸ್ಮಿ, ಮೌಲಾನ ಪಿ.ಎಂ.ಮುಝಮ್ಮಿಲ್, ಕಾಂಗ್ರೆಸ್ ನಾಯಕ ಬಿ.ಕೆ.ಅಲ್ತಾಫ್ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.







