ಕೊರೋನ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ: ಬಸವರಾಜ ಬೊಮ್ಮಾಯಿ

ಬೆಂಗಳೂರು, ಎ.21: ಕೊರೋನ ಸೋಂಕು ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರಕಾರವು ಜಾರಿಗೆ ತಂದಿರುವ ನೂತನ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.
ಬುಧವಾರ ಇಲ್ಲಿನ ಆರ್.ಟಿ.ನಗರದಲ್ಲಿರುವ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಜ್ಞರ ಜೊತೆ ಚರ್ಚೆ ಮಾಡಿದ ನಂತರವೇ ರಾಜ್ಯ ಸರಕಾರವು ಕೊರೋನ ನಿಯಂತ್ರಣಕ್ಕೆ ಕಠಿಣ ಕ್ರಮಗಳುಳ್ಳ ನೂತನ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ ಎಂದರು.
ಸಾರ್ವಜನಿಕರು ನೀಡುವ ಸಹಕಾರದಲ್ಲಿಯೇ ಅವರ ಆರೋಗ್ಯ, ಸಮಾಜದ ಆರೋಗ್ಯ, ರಾಜ್ಯದ ಆರೋಗ್ಯವೆಲ್ಲವೂ ಇದೆ. ನಾವು ಏನೇ ಕಾನೂನು ಮಾಡಿದ್ದರೂ ಸಾರ್ವಜನಿಕರ ಸಹಕಾರ ಇದ್ದರೆ ಮಾತ್ರ ಯಶಸ್ವಿಯಾಗುತ್ತದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ಹೇರಲಾಗಿರುವ ರಾತ್ರಿ ಕರ್ಫ್ಯೂ ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುತ್ತದೆ. ಅನಾವಶ್ಯಕವಾಗಿ ಓಡಾಡುವುದನ್ನು ಜನರು ಕಡಿಮೆ ಮಾಡಬೇಕು. ಮಾರುಕಟ್ಟೆ ಪ್ರದೇಶದಲ್ಲಿ ಸದಾಕಾಲ ಜನರಿಂದ ನೂಕುನುಗ್ಗಲು ಆಗದಂತೆ ನೋಡಿಕೊಳ್ಳಬೇಕು. ಮಾಸ್ಕ್ ಧರಿಸಬೇಕು, ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಅವರು ಹೇಳಿದರು.
ಬೆಂಗಳೂರು ಮತ್ತು ಇತರ ಜಿಲ್ಲೆಗಳಲ್ಲಿ ಕೊರೋನ ನಿಯಮಗಳ ಪರಿಪಾಲನೆ ಮತ್ತು ಇತರ ವಿಚಾರಗಳಿಗೆ ಸಂಬಂಧಪಟ್ಟಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಜವಾಬ್ದಾರಿ ಕೊಡಲು ಚಿಂತನೆ ನಡೆಸಲಾಗಿದೆ. ಕೋವಿಡ್ ಮಾರ್ಗಸೂಚಿಯನ್ನು ಜಾರಿಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.







