ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಜನಗಣತಿಗೆ ಮರು ಸಮೀಕ್ಷೆ
ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು
ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮವು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕನಸಿನ ಕೂಸು. ಅಲೆಮಾರಿಗಳ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲೇ ಪ್ರಥಮ ಬಾರಿಗೆ ಈ ನಿಗಮವನ್ನು ಸ್ಥಾಪಿಸಲಾಗಿದೆ. ನಿಗಮದ ಪ್ರಥಮ ಅಧ್ಯಕ್ಷರಾಗಿ ಮುಖ್ಯಮಂತ್ರಿಯ ಆಪ್ತರೂ ಆಗಿರುವ ಮಂಗಳೂರು ತಾಲೂಕಿನ ಹರೇಕಳ ಗ್ರಾಮದ ಉಳಿದೊಟ್ಟು ನಿವಾಸಿ ಕೆ. ರವೀಂದ್ರ ಶೆಟ್ಟಿ ಅವರು ನವೆಂಬರ್ 30, 2020ರಂದು ಅಧಿಕಾರ ಸ್ವೀಕರಿಸಿದ್ದಾರೆ. ದೇರಳಕಟ್ಟೆಯ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಸ್ಥಾಪಕರೂ ಆಗಿರುವ ರವೀಂದ್ರ ಶೆಟ್ಟಿ ಸಾಹಿತ್ಯ-ಸಾಂಸ್ಕೃತಿಕ ಸಂಘಟಕ. ದ.ಕ.ಜಿಲ್ಲಾ ಬಿಜೆಪಿಯ ವಿಶೇಷ ಆಹ್ವಾನಿತ ಮತ್ತು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿಯ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಐದು ತಿಂಗಳ ಹಿಂದೆ ಅಧಿಕಾರ ಸ್ವೀಕರಿಸಿರುವ ರಾಜ್ಯ ಸಚಿವ ದರ್ಜೆಯ ಸ್ಥಾನಮಾನ ಹೊಂದಿರುವ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವರನ್ನು ‘ವಾರ್ತಾಭಾರತಿ’ ಮಾತನಾಡಿಸಿತು.
►ಪ್ರಶ್ನೆ: ಈ ಹೊಸ ನಿಗಮ ಸ್ಥಾಪನೆಯ ಉದ್ದೇಶವೇನು?
ಉತ್ತರ: ಅಲೆಮಾರಿ ಮತ್ತು ಅರೆ ಅಲೆಮಾರಿ ಜನರು ರಾಜ್ಯದ ಹಲವು ಕಡೆ ಹರಿದು ಹಂಚಿ ಹೋಗಿದ್ದಾರೆ. ಅವರಲ್ಲಿ ಒಗ್ಗಟ್ಟಿಲ್ಲ. ಶೈಕ್ಷಣಿಕ ಜಾಗೃತಿ ಇಲ್ಲ. ಎಲ್ಲಾ ಸ್ತರದಲ್ಲೂ ವಂಚಿತ ಸಮುದಾಯವಾಗಿದೆ. ಅವರ ಈ ಸ್ಥಿತಿಯನ್ನು ಮನಗಂಡಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಆ ಸಮುದಾಯದ ಅಭಿವೃದ್ಧಿಯ ನಿಟ್ಟಿನಲ್ಲಿ ಹೊಸ ನಿಗಮವೊಂದನ್ನು ಸ್ಥಾಪಿಸಿದರು. ಇದರ ಕಚೇರಿಯು ಬೆಂಗಳೂರಿನ ವಸಂತ ನಗರದಲ್ಲಿದೆ. ಎಲ್ಲಾ ಜಿಲ್ಲೆಗಳಲ್ಲೂ ವ್ಯವಸ್ಥಾಪಕರಿದ್ದಾರೆ. ಅಲೆಮಾರಿ ಮತ್ತು ಅರೆ ಅಲೆಮಾರಿಗಳ ಸರ್ವತೋಮುಖ ಅಭಿವೃದ್ಧಿಯೇ ನಿಗಮದ ಮುಖ್ಯ ಉದ್ದೇಶವಾಗಿದೆ.
►ಪ್ರಶ್ನೆ: ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಜನರು ರಾಜ್ಯದ ಯಾವ್ಯಾವ ಜಿಲ್ಲೆಯಲ್ಲಿದ್ದಾರೆ?
ಉತ್ತರ: ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಚಿಕ್ಕಬಳ್ಳಾಪುರ, ಶಿವಮೊಗ್ಗ, ಹಾವೇರಿ, ಬೆಳಗಾವಿ, ಕಲಬುರಗಿ, ಬಾಗಲಕೋಟೆ, ವಿಜಯಪುರದಲ್ಲಿ ಅಧಿಕ ಸಂಖ್ಯೆಯಲ್ಲಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜೋಗಿ, ಗೊಲ್ಲ ಸಮುದಾಯವೂ ಅಲೆಮಾರಿ, ಅರೆ ಅಲೆಮಾರಿಗೆ ಸೇರಿದೆ. ಈ ಸಮುದಾಯದಲ್ಲಿ 46 ಜಾತಿಗಳಿವೆ. ಆ ಪೈಕಿ ಬೈರಾಗಿ, ಗೊಲ್ಲ, ಹೆಳವ, ಜೋಗಿ, ದೊಂಬಿದಾಸ, ಗೋಂದಲಿ, ಸಿಕ್ಕಲಿಗರ್, ಬೆಸ್ತರ್, ಗಿಸಾಡಿ ಜಾತಿಗಳನ್ನು ಗುರುತಿಸಬಹುದು. ಸುಮಾರು 70 ಲಕ್ಷ ಮಂದಿ ಈ ಸಮುದಾಯದಲ್ಲಿರಬಹುದು ಎಂದು ಅಂದಾಜಿಸಲಾಗಿದೆ. ಈ ಸಮುದಾಯದ ನಿಖರ ಜನಸಂಖ್ಯೆಯನ್ನು ಕಲೆ ಹಾಕುವುದಕ್ಕಾಗಿ ಮರು ಸಮೀಕ್ಷೆ ಮಾಡಲು ನಿರ್ಧರಿಸಿರುವೆ.
►ಪ್ರಶ್ನೆ: ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ 5 ತಿಂಗಳಾಗಿವೆ. ಏನೇನು ಕ್ರಮ ಕೈಗೊಂಡಿರುವಿರಿ?
ಉತ್ತರ: ಈಗಾಗಲೇ ನಾನು 13 ಜಿಲ್ಲೆಗಳಲ್ಲಿ ಪ್ರವಾಸ ಮಾಡಿರುವೆ. ಅವರ ಸ್ಥಿತಿಗತಿ ಅರಿತುಕೊಂಡಿರುವೆ. ಅವರ ಸ್ಥಿತಿ ಶೋಚನೀಯವಾಗಿದೆ. ಶೈಕ್ಷಣಿಕವಾಗಿ, ಸಾಮಾಜಿಕವಾಗಿ ತೀರಾ ಕೆಳಸ್ತರದಲ್ಲಿದ್ದಾರೆ. ಅವರನ್ನು ಮುಖ್ಯವಾಹಿನಿಗೆ ತರಬೇಕಿದೆ. ನಾನು ಆ ಸಮುದಾಯದವನಲ್ಲದಿದ್ದರೂ ಮುಖ್ಯಮಂತ್ರಿ ನನ್ನ ಮೇಲೆ ವಿಶ್ವಾಸವಿಟ್ಟು ಹೊಸ ಜವಾಬ್ದಾರಿ ವಹಿಸಿಕೊಟ್ಟಿದ್ದಾರೆ. ಅದಕ್ಕೆ ಚ್ಯುತಿಯಾಗದಂತೆ ಕಾರ್ಯನಿರ್ವಹಿಸುವೆ.
► ಪ್ರಶ್ನೆ: ಈ ಸಮುದಾಯದ ಅಭಿವೃದ್ಧಿಗೆ ಯಾವ ಯೋಜನೆ ಹಾಕಿಕೊಂಡಿರುವಿರಿ?
ಉತ್ತರ: ಈ ಸಮುದಾಯದವರು ಹೆಚ್ಚಿನ ಸಂಖ್ಯೆಯಲ್ಲಿ ಡೇರೆಯಲ್ಲಿ ವಾಸಿಸುತ್ತಿದ್ದಾರೆ. ಅವರನ್ನು ಡೇರೆಯಿಂದ ಮುಕ್ತಗೊಳಿಸಿ ಯೋಗ್ಯ ವಸತಿ ವ್ಯವಸ್ಥೆ ಕಲ್ಪಿಸಬೇಕಿದೆ. ಅದಕ್ಕಾಗಿ ‘ಡೇರೆ ಮುಕ್ತ ಕರ್ನಾಟಕ’ದ ಯೋಜನೆ ಹಾಕಿಕೊಂಡಿರುವೆ. ಅದಲ್ಲದೆ ಸ್ವಯಂ ಉದ್ಯೋಗ ಸಾಲ ಯೋಜನೆ, ಸ್ವಸಹಾಯ ಗುಂಪುಗಳ ಮೂಲಕ ಸಾಲ ಮತ್ತು ಸಹಾಯಧನ, ಶೈಕ್ಷಣಿಕ ಸಾಲಕ್ಕಾಗಿ ಅರಿವು ಯೋಜನೆ, ಗಂಗಾ ಕಲ್ಯಾಣ ಯೋಜನೆ, ಭೂ ಖರೀದಿ ಯೋಜನೆ, ಬ್ಯಾಂಕ್ಗಳ ಸಹಕಾರದಲ್ಲಿ ಸಾಲ... ಇತ್ಯಾದಿ ಹಲವು ಯೋಜನೆಗಳನ್ನು ಹಾಕಿಕೊಂಡಿರುವೆ.
►ಪ್ರಶ್ನೆ: ಈ ಸಮುದಾಯದ ಜಾತಿ ಪ್ರಮಾಣಪತ್ರದಲ್ಲಿ ಗೊಂದಲವಿದೆಯಲ್ಲಾ?
ಉತ್ತರ: ಹೌದು... ಜಾತಿ ಪ್ರಮಾಣ ಪತ್ರದಲ್ಲಿ ಗೊಂದಲವಿದ. ವಿತರಣೆಯಲ್ಲಿ ಲೋಪವಿದೆ. ಪ್ರತ್ಯೇಕವಾಗಿ ಅಲೆಮಾರಿ ಎಂದು ನಮೂದಾಗಿಲ್ಲ. ಇದರಿಂದ ಸರಕಾರಿ ಸೌಲಭ್ಯ ಪಡೆಯಲು ಸಮಸ್ಯೆಯಾಗುತ್ತದೆ. ಇತ್ತೀಚೆಗೆ ಮೈಸೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಜಂಪೇನಹಳ್ಳಿಯಲ್ಲಿ ದಲಿತ ಮಗುವಿನ ಶವ ಸಂಸ್ಕಾರಕ್ಕೆ ಖಾಸಗಿ ಜಮೀನಿನ ವ್ಯಕ್ತಿಯೊಬ್ಬರು ಅಡ್ಡಿಪಡಿಸಿದ್ದಾರೆ ಎಂದು ವರದಿಯಾಗಿತ್ತು. ತಕ್ಷಣ ನಾನು ಅತ್ತ ಧಾವಿಸಿದೆ. ದಾಖಲೆಗಳನ್ನು ಪರಿಶೀಲಿಸಿದಾಗ ಅದು ಅಲೆಮಾರಿ (ದೊಂಬಿದಾಸ) ಕುಟುಂಬದ ಮಗು ಎಂದು ಗೊತ್ತಾಯಿತು. ಆದರೆ ಜಾತಿ ಪ್ರಮಾಣಪತ್ರದಲ್ಲಿ ಅಲೆಮಾರಿ ಎಂದು ನಮೂದಾಗಿರಲಿಲ್ಲ. ಈ ಗೊಂದಲಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಅಲೆಮಾರಿ ಸಮುದಾಯದವರು ಹೆಚ್ಚಿರುವ ಪ್ರದೇಶಗಳಲ್ಲಿ ಪ್ರತ್ಯೇಕ ಸ್ಮಶಾನ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿರುವೆ.
►ಪ್ರಶ್ನೆ: ಇಷ್ಟೆಲ್ಲಾ ಯೋಜನೆ ರೂಪಿಸಲು ಅನುದಾನ ಇದೆಯೇ?
ಉತ್ತರ: ಅನುದಾನದ ಕೊರತೆಯೇ ನಿಗಮವನ್ನು ಕಾಡುತ್ತಿದೆ. ಆರಂಭದಲ್ಲಿ 25 ಕೋ.ರೂ. ಅನುದಾನ ಬಿಡುಗಡೆ ಮಾಡಲಾಗಿತ್ತು. ಬಳಿಕ 29 ಲಕ್ಷ ರೂ.ನ ಶೇರು ಬಂಡವಾಳ ಹೂಡಲಾಗಿದೆ. ಹಾಗಾಗಿ ನಿಗಮದ ಮೂಲಕ ಹಾಕಲಾದ ಯೋಜನೆ ಯಶಸ್ವಿಯಾಗಿ ಕೈಗೊಳ್ಳಲು 250 ಕೋ.ರೂ. ಅನುದಾನದ ಬೇಡಿಕೆಯನ್ನು ಮುಖ್ಯಮಂತ್ರಿಯ ಮುಂದಿಟ್ಟಿರುವೆ.
►ಪ್ರಶ್ನೆ: ಅಲೆಮಾರಿ,ಅಲೆಮಾರಿ ಸಮುದಾಯದವರಲ್ಲದ ನೀವು ಹೇಗೆ ಈ ನಿಗಮದ ಅಧ್ಯಕ್ಷರಾಗಲು ಅವಕಾಶ ಸಿಕ್ಕಿತು?
ಉತ್ತರ: ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸುತ್ತಲೇ ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನ ಆಯೋಜಿಸುತ್ತಿದ್ದ ನಾನು 15 ವರ್ಷದ ಹಿಂದೆ ರಾಜಕೀಯಕ್ಕೆ ಪದಾರ್ಪಣೆ ಮಾಡಿದೆ. ಆದರೆ ನಾನು ಯಾವತ್ತೂ ಕೂಡ ಯಾವುದೇ ಹುದ್ದೆ, ಸ್ಥಾನಮಾನದ ಮೇಲೆ ಕಣ್ಣಿಟ್ಟವನಲ್ಲ. 2010ರಲ್ಲಿ ನಾನು ದೇರಳಕಟ್ಟೆಯ ರೋಟರಿ ಕ್ಲಬ್ನ ಅಧ್ಯಕ್ಷನಾಗಿದ್ದೆ. ಮುಡಿಪುವಿನಲ್ಲಿ 24 ಅಲೆಮಾರಿ ಕುಟುಂಬಗಳ 34 ಮಕ್ಕಳು ಶಿಕ್ಷಣದಿಂದ ವಂಚಿತರಾಗಿರುವ ಮಾಹಿತಿ ತಿಳಿದುಕೊಂಡೆ. ತಕ್ಷಣ ನಾನು ಅಲ್ಲಿಗೆ ಧಾವಿಸಿ ಆ ಮಕ್ಕಳ ಶೈಕ್ಷಣಿಕ ದತ್ತು ತೆಗೆದುಕೊಂಡೆ. ನನ್ನ ಅಧ್ಯಕ್ಷ ಅವಧಿ ಮುಗಿದರೂ ಕೂಡ ಮಕ್ಕಳ ಶೈಕ್ಷಣಿಕ ದತ್ತು ಯೋಜನೆಯನ್ನು ಕೈ ಬಿಡಲಿಲ್ಲ. 2017ರವರೆಗೂ ನಾನು ಆ ಮಕ್ಕಳ ಶೈಕ್ಷಣಿಕ ಜವಾಬ್ದಾರಿ ವಹಿಸಿಕೊಂಡೆ. ಬಹುಶಃ ಅದರ ಪ್ರತಿಫಲವೋ ಏನೋ, ಅದೇ ಸಮುದಾಯದ ಅಭಿವೃದ್ಧಿಗಾಗಿ ಸ್ಥಾಪಿಸಲಾದ ಹೊಸ ನಿಗಮದ ಅಧ್ಯಕ್ಷ ಸ್ಥಾನ ಸಿಕ್ಕಿದೆ ಎಂದು ನನಗೆ ಅನಿಸುತ್ತಿದೆ.
►ಪ್ರಶ್ನೆ: ಈ ಸಮುದಾಯದ ಜನರನ್ನು ಸಂಘಟಿಸುವ ಬಗ್ಗೆ...?
ಉತ್ತರ: ಅದೇ... ತಾಲೂಕು, ಜಿಲ್ಲಾ, ರಾಜ್ಯಮಟ್ಟದ ಸಮ್ಮೇಳನ ಮಾಡುವ ಮೂಲಕ ಅಲೆಮಾರಿ, ಅರೆ ಅಲೆಮಾರಿ ಜನರನ್ನು ಸಂಘಟಿಸಬೇಕೆಂದಿರುವೆ. ಅವರ ಮೂಲಕಸಬು, ನಂಬಿಕೆ, ಆಚಾರ-ವಿಚಾರ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಿರಿತನವನ್ನು ಹೊರಜಗತ್ತಿಗೆ ಪರಿಚಯಿಸಬೇಕೆಂದಿರುವೆ.